

ಉಡುಪಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆಯೂ ಕೃಷ್ಣ ಮಠಕ್ಕೆ ಹೋಗಿಲ್ಲ. ಕನಕ ಮತ್ತು ಕೃಷ್ಣನಿಗೆ ವಿಶೇಷ ಸಂಬಂಧವಿದೆ. ಭಕ್ತ ಕನಕದಾಸರ ಪುತ್ಥಳಿಯೂ ಇದೆ. ಅವರು ಅಧಿಕಾರವಿದ್ದಾಗ ಅನೇಕ ದೇವಸ್ಥಾನಗಳಿಗೆ ಹಣ ಕೊಟ್ಟಿದ್ದಾರೆ. ನಾನು ಕೇಳಿದಾಗಲೂ ಅನುದಾನ ನೀಡಿದ್ದಾರೆ. ಆದರೆ ಉಡುಪಿಗೆ ಬರದ ಕಾರಣ ಕನಕ ಮತ್ತು ಕೃಷ್ಣ ದೇವರ ಶಾಪದಿಂದ ಅವರಿಗೆ ಸೋಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲಾದರೂ ಸಿದ್ದರಾಮಯ್ಯ ಅವರು ಮನಸ್ಸು ಬದಲಿಸಿ ಮಠಕ್ಕೆ ಬಂದರೆ ಒಳಿತಾಗಬಹುದು. ನಮಗೂ ಅವರಿಗೂ ವೈಚಾರಿಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ವೈಯಕ್ತಿಕವಾಗಿ ಒಳಿತನ್ನು ಬಯಸುತ್ತೇನೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ. ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಸಿಗುತ್ತದೆ. ಈ ಬಾರಿ ಶಿವಮೊಗ್ಗದಲ್ಲಿ ನನಗೆ ಅಥವಾ ಮಗನಿಗೆ ಕೊಡಬಹುದು. ಬೇರೆ ಕಾರ್ಯಕರ್ತನಿಗೂ ಸಿಗಬಹುದು. ಕೇಂದ್ರ ನಾಯಕರು ೩-೪ ಸರ್ವೆ ಮಾಡಿಸಿದ್ದಾರೆ. ಪಕ್ಷನಿಷ್ಠೆ, ಜನರ ಅಭಿಪ್ರಾಯ ಪಡೆದು ಟಿಕೇಟ್ ನೀಡಲಿದ್ದಾರೆ ಎಂದರು.
ಆಜಾನ್ ವಿಚಾರ ವಿವಾದಾತ್ಮಕ ಹೇಗೆ?
ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ೩-೪ ಮೈಕಗಳನ್ನಿಟ್ಟು ಕೂಗಿದರೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ರಾಜ್ಯದಲ್ಲೆಡೆ ಪರೀಕ್ಷೆ ನಡೆಯುತ್ತಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ. ಜನಸಾಮಾನ್ಯರ ಭಾವನೆಯನ್ನು ನಾನು ಹೇಳಿದ್ದೇನೆ. ಇದರಲ್ಲಿ ವಿವಾದಾತ್ಮಕ ವಿಷಯ ಏನಿದೆ. ಕಾಂಗ್ರೆಸ್‌ನವರಿಗೆ ಪ್ರತಿಭಟನೆ ನಡೆಸಲು ಬೇರೆ ಅಜೆಂಡ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರು ೪ ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ನಮಗೆ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಆದರೆ ಈ ಬಾರಿ ರಾಜ್ಯಾದ್ಯಂತ ಸಂಚರಿಸುತ್ತಿರುವ ವಿಜಯಸಂಕಲ್ಪ ಯಾತ್ರೆಗೆ ನಿರೀಕ್ಷೆಗೆ ಮೀರಿ ಜನಬೆಂಬಲ ನೀಡುತ್ತಿದ್ದು, ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಿಕ್ಕೆ ಬರುವ ವಿಶ್ವಾಸವಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ವೇಗ ಲಭಿಸಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಕನಿಷ್ಠ ೧೦೦೦ ಕೋಟಿ ರೂ. ಅನುದಾನ ನೀಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಆದರೆ ಡಿಕೆಶಿ ಮನೆಗೆ ಇಡಿ ರೈಡ್ ಮಾಡಿದಾಗ ಸಾವಿರಾರು ಕೋಟಿ ರೂ. ಸಿಕ್ಕಿದೆ. ಸಿದ್ದರಾಮಯ್ಯ ಅವರು ಅರ್ಕಾವತಿ ಪ್ರಕರಣದಲ್ಲಿ ೮೦೦ ಎಕ್ರೆ ರಿಡೂ ಮಾಡಿ ೮೦೦೦ ಕೋಟಿ ರೂ. ಭ್ರಷ್ಟಾಚಾರ ಎಸಗಿದ್ದಾರೆ. ಈ ಬಗ್ಗೆ ನಿವೃತ್ತ ನ್ಯಾಯಾಧೀಶ ಕೆಂಪಣ್ಣ ವರದಿ ಕೊಟ್ಟಿದ್ದಾರೆ. ಬಿಜೆಪಿ ಬಗ್ಗೆ ಆರೋಪ ಮಾಡುವವರು ಈವರೆಗೆ ಒಂದೇ ಒಂದು ದಾಖಲೆ ಕೊಟ್ಟಿಲ್ಲ. ಸಂತೋಷ್ ಪಾಟೀಲ್ ಪ್ರಕರಣದಲ್ಲಿ ತನಿಖಾ ತಂಡ ಕ್ಲೀನ್ ಚಿಟ್ ನೀಡಿದೆ. ಮಾಡಾಳ್ ವಿರೂಪಾಕ್ಷಪ್ಪ ವಿಚಾರದಲ್ಲಿ ಈಗ ಏನೂ ಹೇಳಲು ಆಗುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಸೂಕ್ತಕ್ರಮ ಆಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ವಿಪ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಭಾಗ ಪ್ರಭಾರಿ ಉದಯ್‌ಕುಮಾರ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿಶೋರ್ ಕುಂದಾಪುರ, ಕುತ್ಯಾರು ನವೀನ್ ಶೆಟ್ಟಿ, ನಯನಾ ಗಣೇಶ್, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.