

ಸ.ದಾ. ಜೋಶಿ ಬೀದರ್
ವಿಧಾನಸಭೆ ಉಪ ಚುನಾವಣೆ ಹೊಸ್ತಿಲಲ್ಲಿರುವ ಬಸವಭೂಮಿ ಬಸವಕಲ್ಯಾಣಕ್ಕೆ ಶುಕ್ರವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿ ನೀಡಿ, ಕ್ಷೇತ್ರದಲ್ಲಿ ವಿದ್ಯುತ್ ಸಂಚಲನ ಮೂಡಿಸಿದ್ದಾರೆ. ಇವರ ಭೇಟಿ ದಿನವಿಡೀ ಕಲ್ಯಾಣದ ನೆಲ ಅಕ್ಷರಶಃ ಕೇಸರಿಮಯವಾಗಿಸುವ ಜತೆಗೆ ಉಪ ಚುನಾವಣೆ ಅಖಾಡಕ್ಕೂ ರಂಗೇರಿಸುವಂತೆ ಮಾಡಿತು.
ಕೆ.ಆರ್.ಪೇಟೆ, ಶಿರಾ ಉಪ ಚುನಾವಣೆ ಉಸ್ತುವಾರಿ ಹೊತ್ತು ಭರ್ಜರಿ ಜಯ ತಂದುಕೊಟ್ಟ ನಂತರ ವಿಜಯೇಂದ್ರ ಅವರು ಶೀಘ್ರ ಎದುರಾಗಲಿರುವ ಬಸವಕಲ್ಯಾಣ ಉಪ ಚುನಾವಣೆ ಸಾರಥ್ಯ ವಹಿಸಲಿದ್ದಾರೆ ಎಂಬ ಚರ್ಚೆ ನಡುವೆಯೇ ಇಲ್ಲಿಗೆ ಭೇಟಿ ನೀಡಿರುವುದು ಸಾಕಷ್ಟು ಮಹತ್ವ ಪಡೆದು ಕೇಸರಿ ಪಡೆಗೆ ಜೋಶ್ ತಂದಿತ್ತು. ಹೀಗಾಗಿ ಬಸವಕಲ್ಯಾಣಕ್ಕೆ ಪ್ರವೇಶಿಸಿ ಐದಾರು ತಾಸು ಸಂಚರಿಸಿ, ಇಲ್ಲಿಂದ ವಾಪಸ್ ತೆರಳುವವರೆಗೂ ಸಹಸ್ರಾರು ಸಂಖ್ಯೆಯ ಯುವ ಪಡೆ ವಿಜಯೇಂದ್ರ ಅವರ ಜತೆಗಿತ್ತು. ನಿರೀಕ್ಷೆಯಂತೆ ಇವರ ಭೇಟಿ ಬಸವ ನೆಲದಲ್ಲಿ ವಿಜಯ ಹವಾ ಸೃಷ್ಟಿಗೆ ಕಾರಣವಾಯಿತು.
ವಿಶ್ವದ ಮೊದಲ ಸಂಸತ್ತು ಖ್ಯಾತಿಯ ಅನುಭವ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಮೂಲಕ ವಿಜಯೇಂದ್ರ ಅವರು ಕಲ್ಯಾಣದ ಪ್ರವಾಸ ಆರಂಭಿಸಿದರು. ನಾನಾ ಮಠಾಧೀಶರು, ಪಕ್ಷದ ಮುಖಂಡರು, ವಿವಿಧ ಸಮಾಜದ ಗಣ್ಯರೊಂದಿಗೆ ಸರಣಿ ಸಭೆ ಮತ್ತು ಸಮಾಲೋಚನೆ ನಡೆಸಿದರು. ಮರಾಠಾ ಸಮಾಜದ ಮುಖಂಡರ ಬೃಹತ್ ಸಭೆಯಲ್ಲೂ ಪಾಲ್ಗೊಂಡರು. ಸಮರ್ಥ ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ತಮ್ಮದೇ ನೆಟ್ ವಕ್೯ ಮೂಲಕವೂ ಮಾಹಿತಿ ಕಲೆ ಹಾಕಿದರು. ಈ ಮೂಲಕ ಕ್ಷೇತ್ರದಲ್ಲಿ ಕಮಲ ಅರಳಿಸುವ ತಂತ್ರಗಾರಿಕೆ ಆರಂಭಿಸಿದರು.
ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಶೀಘ್ರ ಚುನಾವಣೆ ನಡೆಯಲಿದೆ. ಕ್ಷೇತ್ರ ಕೈವಶಕ್ಕೆ ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಉಪ ಚುನಾವಣೆ ವಿಜಯದ ರೂವಾರಿ ಎನಿಸಿರುವ ವಿಜಯೇಂದ್ರ ಅವರ ಹೆಗಲಿಗೆ ವರಿಷ್ಠರು ಇಲ್ಲಿನ ಉಸ್ತುವಾರಿ ವಹಿಸುವ ಸಾಧ್ಯತೆಗಳಿವೆ. ಇವರ ಮೊದಲ ಭೇಟಿಯು ಇಲ್ಲಿನ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳ ನಿದ್ರೆಗೆಡಿಸುವಂತೆ ಮಾಡಿದೆ.
ಬಸವಕಲ್ಯಾಣ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವೆ. ಸಂಘಟನೆಯ ಜತೆಗೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ದುಡಿಯುವೆ. ಬಸವಕಲ್ಯಾಣ ಮತ್ತು ಮಸ್ಕಿ ಉಪ ಚುನಾವಣೆಯಲ್ಲಿ ಕಮಲ ಅರಳುವುದು ಪಕ್ಕಾ. ವರಿಷ್ಠರು ನೀಡುವ ಹೊಣೆ ನಿಭಾಯಿಸಲು ಹಗಲಿರುಳು ಕೆಲಸ ಮಾಡುವೆ. | ಬಿ.ವೈ.ವಿಜಯೇಂದ್ರಬಿಜೆಪಿ ರಾಜ್ಯ ಉಪಾಧ್ಯಕ್ಷ