ಮೈಸೂರಿನಲ್ಲಿ ವಿಜಯಾ ಹರನ್ ಆತ್ಮಕತೆ ಬಿಡುಗಡೆ

Vijaya Haran's autobiography released in Mysore
Published on

ಮೈಸೂರು: ಆತ್ಮಕತೆ ಬರೆಯುವುದು ಸವಾಲಿನ ಕೆಲಸ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಉಪ ನಿರ್ದೇಶಕ ಎ.ಎಸ್. ಚಂದ್ರಮೌಳಿ ಹೇಳಿದರು.

ಸಂಸ್ಕೃತಿ ಬುಕ್ ಏಜೆನ್ಸೀಸ್ ವಿ.ವಿ. ಮೊಹಲ್ಲಾದ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೈಸೂರು ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಡಾ.ಎಂ.ಎಸ್. ವಿಜಯಾ ಹರನ್ ರಚನೆಯ ‘ಆಕಾಶವಾಣಿಯ ಆ ದಿನಗಳು’ ಕೃತ್ನಿ ಬಿಡುಗಡೆ ಮಾಡಿ ಮಾತನಾಡಿ, ಆತ್ಮಕತೆ ಬರಯಬೇಕಾದರೆ ಎಲ್ಲ ಘಟನೆಗಳು ನೆನಪಿರಬೇಕಾಗುತ್ತದೆ. ವಿಜಯಾ ಹರನ್ ಅವರು ತಮ್ಮ 38 ವರ್ಷಗಳ ಸೇವಾವಧಿಯಲ್ಲಿ ಕೆಲಸಕ್ಕೆ ಸೇರಿದ ದಿನದಿಂದ ಹಿಡಿದು ನಿವೃತ್ತಿಯಾಗುವವರೆಗಿನ ಎಲ್ಲ ಘಟನೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಉಪಕಾರ ಸ್ಮರಣೆ ಅಪರೂಪವಾಗಿರುವಾಗ ತಮಗೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದ್ದಾರೆ ಎಂದರು.

ಆಕಾಶವಾಣಿಯಲ್ಲಿ ಮಹಿಳಾ ಉದ್ಯೋಗಿಗಳು ಎದುರಿಸುವ ಸಮಸ್ಯೆಗಳು, ಪ್ರಸಾರದ ಸಮಯದಲ್ಲಿನ ಒತ್ತಡಗಳು ಸೇರಿದಂತೆ ಎಲ್ಲವನ್ನು ಮುಚ್ಚುಮರೆ ಇಲ್ಲದೇ ಇಲ್ಲಿ ದಾಖಲಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

ಆಕಾಶವಾಣಿಯದು ಸೃಜನಶೀಲ ಕೆಲಸ. ಇಲ್ಲಿ ಮಾಡುವ ಕೆಲಸವನ್ನು ಬೇರೆ ಮಾಧ್ಯಮಗಳಲ್ಲಿ ಮಾಡಲಾಗದು. ಇಲ್ಲಿ ಮಾಡುವ ಕೆಲಸದಲ್ಲಿ ತೃಪ್ತಿ ಸಿಗುತ್ತದೆ. ಆಕಾಶವಾಣಿ ಪ್ರಭಾವಶಾಲಿ ಮಾಧ್ಯಮ. ಈವರೆಗೆ ಬಾನುಲಿ ಸಾಹಿತ್ಯ ಹೆಚ್ಚಾಗಿ ಬಂದಿರಲಿಲ್ಲ. ಹೀಗಾಗಿ ಈ ರೀತಿಯ ಪುಸ್ತಕಗಳ ಅವಶ್ಯಕತೆ ಇದೆ. ಹಿರಿಯರ ಅನುಭವ ಭಂಡಾರ ಪುಸ್ತಕವಾಗಿ ಬರಬೇಕು. ಕ್ಯೂಆರ್ ಕೋಡ್ ಮೂಲಕ ಆಕಾಶವಾಣಿಯ ಕಾರ್ಯಕ್ರಮ ಕೇಳುವಂತೆ ಮಾಡಿರುವುದು ಹೊಸ ರೀತಿಯ ಆಲೋಚನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಈ ಕೃತಿಯು ವಿಜಯಾ ಹರನ್ ಅವರ ಆತ್ಮಕತನವೂ ಹೌದು, ಮೈಸೂರು ಸೇರಿದಂತೆ ಅವರ ಕೆಲಸ ಮಾಡಿದ ಸ್ಥಳಗಳ ಸಾಂಸ್ಕೃತಿಕ ಕತನವೂ ಹೌದು ಎಂದರು.

ಈ ಸಂದರ್ಭ ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಕೃತಿಯ ಲೇಖಕಿ ಡಾ.ಎಂ.ಎಸ್. ವಿಜಯಾ ಹರನ್, ಸಂಸ್ಕೃತಿ ಬುಕ್ ಏಜೆನ್ಸೀಸ್‌ನ ಸರಸ್ವತಿ ಸುಬ್ರಹ್ಮಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net