ವಿಜಯಾ ರೈತರ ಸೇವಾ ಸಹಕಾರಿ ಸಂಘಕ್ಕೆ 40.80 ಲಕ್ಷ ರೂ.ಲಾಭಾಂಶ : ರಂಗನಾಥ ಶೆಟ್ಟಿ ಮಾಹಿತಿ ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ

New Project (5)
Published on

ಮೂಲ್ಕಿ : 2024-25ನೇ ಆರ್ಥಿಕ ವರ್ಷದಲ್ಲಿ ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘ 40.80 ಲಕ್ಷ ರೂ. ಲಾಭಾಂಶ ಗಳಿಸಿ, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು. ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ಖರೀದಿಸಲಾಗಿದ್ದು ಮುಂದಿನ ವರ್ಷ ಸ್ವರ್ಣ ಮಹೋತ್ಸವದ ಹಿನ್ನೆಲೆ ಕಟ್ಟಡ ನಿರ್ಮಾಣದ ಬಗ್ಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.

ಮೂಲ್ಕಿ ಬಿಲ್ಲವ ಸಂಘದಲ್ಲಿ ಭಾನುವಾರ ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ 49ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘ ಕೃಷಿ, ಹೈನುಗಾರಿಕೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಶಾಸಕ ಉಮಾನಾಥ ಕೋಟ್ಯಾನ್ ಸೂಚನೆಯಂತೆ ಮುಂದಿನ ಬಾರಿ ಶಿಕ್ಷಣದ ಜತೆಗೆ ಯಕ್ಷಗಾನ, ಭರತನಾಟ್ಯ ಸಹಿತ ವಿವಿಧ ಕಲಾ ಪ್ರಾಕಾರಗಳು ಮತ್ತು ಕ್ರೀಡಾ ಸಾಧಕರಿಗೂ ಪ್ರೋತ್ಸಾಹ ನೀಡಲಾಗುವುದು ಎಂದರು.

ಸಂಘ ಮೂಲ್ಕಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಸದಾಶಿವ ರಾವ್ ನಗರ, ಶಿಮಂತೂರು, ಬಳ್ಕುಂಜೆ, ಅತಿಕಾರಿಬೆಟ್ಟು, ಕುಕ್ಕಟ್ಟೆ, ಕರ್ನಿರೆ ಶಾಖೆ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ 142.13 ರೂ. ಕೋಟಿ ವ್ಯವಹಾರ ನಡೆಸಿದ್ದು ಲೆಕ್ಕಪರಿಶೋಧನಾ ವರ್ಗೀಕರಣ ‘ಎ’ ತರಗತಿ ಗಳಿಸಿದೆ ಎಂದರು.

ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ನರಸಿಂಹ ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಮಮತಾ ಡಿ.ಪೂಂಜ, ಪದ್ಮಿನಿ ವಿ.ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ರಾಮ ನಾಕ್, ನಂಜುಂಡ ಆರ್.ಕೆ. ಮುಖ್ಯ ಅತಿಥಿಗಳಾಗಿದ್ದರು.

ಸಂಘದ ನಿರ್ದೇಶಕ ಗಂಗಾಧರ ವಿ.ಶೆಟ್ಟಿ ಸ್ವಾಗತಿಸಿ. ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ವ್ಯವಸ್ಥಾಪಕ ಚಂದ್ರಕಾಂತ ಶೆಟ್ಟಿ ವರದಿ ಮಂಡಿಸಿದರು. ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಸಂಘದ ನಿರ್ದೇಶಕ ಅಶೋಕ್ ಕುಮಾರ್ ಚಿತ್ರಾಪು ವಂದಿಸಿದರು.

ಶ್ರದ್ಧಾಂಜಲಿ, ಸನ್ಮಾನ

ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಚಿತ್ತರಂಜನ್ ಶೆಟ್ಟಿ ಉಳೆಪಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘ ವ್ಯಾಪ್ತಿಯ ಪ್ರಗತಿಪರ ಕೃಷಿಕರಾದ ಭುಜಂಗ ಆರ್.ಶೆಟ್ಟಿ, ಸದಾನಂದ ಸನಿಲ್ ನಾಕದೈಲು ಚಿತ್ರಾಪು, ಗಿರಿಧರ್ ಕಾಮತ್ ಅತಿಕಾರಿಬೆಟ್ಟು, ದಿನಕರ ಕಾಂಚನ್ ಮಾನಂಪಾಡಿ, ನೀಲು ಪೂಜಾರ‌್ತಿ ಅತಿಕಾರಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ 25 ಪ್ರತಿಭಾವಂತರಿಗೆ ವಿದ್ಯಾರ್ಥಿವೇತನದೊಂದಿಗೆ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net