ಬಸವಣ್ಣ-ಟಿಪ್ಪು ವಿಚಾರಕ್ಕೆ ಚುನಾವಣೆ; ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ

1203-Kpl-Ravi-1 (1)
ಕೊಪ್ಪಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉದ್ಘಾಟಿಸಿದರು. ಕೇಂದ್ರ ಸಚಿವ ಆನೇಕಲ್ ನಾರಾಯಣ ಸ್ವಾಮಿ, ಸಚಿವರಾದ ಹಾಲಪ್ಪ ಆಚಾರ್, ಆನಂದ ಸಿಂಗ್, ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ ಇತರರಿದ್ದರು.
Published on

ಕೊಪ್ಪಳ: ರಾಜ್ಯದಲ್ಲಿ ಬಸವಣ್ಣ ಹಾಗೂ ಟಿಪ್ಪು ವಿಚಾರವಾಗಿ ಚುನಾವಣೆ ನಡೆಯಲಿದೆ. ನಮ್ಮದು ಬಸವಣ್ಣನ ವಿಚಾರ. ಕಾಂಗ್ರೆಸ್‌ನವರದು ಟಿಪ್ಪು ವಿಚಾರ. ನಿಮಗೆ ಯಾವುದು ಬೇಕೆಂದು ನಿರ್ಧರಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.


ನಗರದ ಸಾರ್ವಜನಿಕ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೇವೆ. ಕಾಂಗ್ರೆಸ್‌ನವರು ಭಯೋತ್ಪಾದಕರಿಗೆ ಬಿರಿಯಾನಿ ಭಾಗ್ಯ ಕೊಟ್ಟಿದ್ದೇವೆಂದು ಹೇಳಲು ನಾಚಿಕೆಯಾಗುತ್ತಿದೆ. ಅದಕ್ಕೆ ಮುಂದೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಮಂಗಳೂರಿನ ವ್ಯಕ್ತಿಯೊಬ್ಬ ಮೂರು ದಿನದಿಂದ ವಿದ್ಯುತ್ ಇಲ್ಲವೆಂದು ಕರೆ ಮಾಡಿದ್ದಕ್ಕೆ ಜೈಲಿಗೆ ಕಳಿಸಿದರು. ಇಂದು 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ. ಸುಳ್ಳೇ ಕಾಂಗ್ರೆಸ್ ಮನೆ ದೇವರು. ನೆಹರು ಹೆಸರು ಹೇಳಿದರೆ ಜನ ನಂಬಲ್ಲ ಅಂತ ಅವರಿಗೆ ಗೊತ್ತಿದೆ. ಅದಕ್ಕೆ ಗಾಂಧಿ ಕುಟುಂಬದೊಂದಿಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಗಾಂಧಿ ಎಂದು ಹೆಸರಿಟ್ಟುಕೊಂಡು ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಮಕ್ಕಳಲ್ಲಿ ಜಾತಿ ವಿಷ ಬೀಜ ಬಿತ್ತಿದ್ದು, ಒಂದೇ ಕೋಮಿಗೆ ಶಾದಿ ಭಾಗ್ಯ, ಮತಾಂಧ ಟಿಪ್ಪು ಜಯಂತಿ ಆಚರಿಸಿ ಸಮಾಜ ಒಡೆದಿದ್ದು ಸಿದ್ದರಾಮಯ್ಯ. ನಾವು ಬಸವಣ್ಣನ ಅನುಭವ ಮಂಟಪ ಜಾರಿಗೆ ಮುಂದಾಗಿದ್ದೇವೆ. ಅನುಭವ ಮಂಟಪದಲ್ಲಿ ಎಲ್ಲ ಸಮುದಾಯದವರು ಸಮಾನವಾಗಿದ್ದರು. ರಾಜ್ಯದಲ್ಲಿ ಬಸವಣ್ಣನ ವಿಚಾರ ಮತ್ತು ಟಿಪ್ಪುವಿನ ವಿಚಾರದಲ್ಲಿ ಚುನಾವಣೆ ನಡೆಯಲಿದೆ. ನಿಮಗೆ ಯಾವ ವಿಚಾರ ಬೇಕೆಂದು ನಿರ್ಧರಿಸಿ. ನಮ್ಮದು ಬಸವಣ್ಣನ ವಿಚಾರವಾಗಿದ್ದು ಬಿಜೆಪಿಗೆ ಅಧಿಕಾರ ನೀಡಿ. ದೇಶದ ಗೌರವ, ರಕ್ಷಣೆಗಾಗಿ ನಮ್ಮನ್ನು ಬೆಂಬಲಿಸಿ ಎಂದು ಮತ ಯಾಚಿಸಿದರು.


ಕೇಂದ್ರ ಸಚಿವ ಆನೇಕಲ್ ನಾರಾಯಣ ಸ್ವಾಮಿ ಮಾತನಾಡಿ, ದೇಶದಲ್ಲಿ 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಜನರ ವಿಶ್ವಾಸ ಗಳಿಸಿಲ್ಲ. ಈಗ ದಯವಿಟ್ಟು ಮತ ಹಾಕಿ ಎಂದು ಭಿಕ್ಷೆ ಬೇಡುತ್ತಿದೆ. ‘ನಮ್ಮನ್ನು ನಂಬ್ರಿ.. ದಯವಿಟ್ಟು ನಂಬಿ. ಗ್ಯಾರಂಟಿ ಕೊಡ್ತೀವಿ’ ಅನ್ನುತ್ತಿದ್ದಾರೆ. ಅಂದು ಸರಿಯಾಗಿ ಆಡಳಿತ ನಡೆಸಿದ್ದರೆ, ಇಂದು ಅಂಗಲಾಚುವ ಸ್ಥಿತಿ ಬರುತ್ತಿರಲಿಲ್ಲ. ಬಡವರಿಗೆ ಮನೆ, ಶೌಚಗೃಹ, ವಿದ್ಯುತ್, ಗ್ಯಾಸ್ ಸಿಲಿಂಡರ್, ಕುಡಿವ ನೀರು ನೀಡಿದ್ದು ನಮ್ಮ ಸರ್ಕಾರ. ಪಜಾ, ಪಪಂ ಮೀಸಲು ಮೊದಲ ಬಾರಿ ಹೆಚ್ಚಿಸಿದ್ದು ವಾಜಪೇಯಿ. ಈಗ ಸಿಎಂ ಬೊಮ್ಮಾಯಿ ಮತ್ತೊಮ್ಮೆ ಮೀಸಲು ಹೆಚ್ಚಿಸಿದ್ದಾರೆ ಎಂದರು.


ಸಂಸದ ಸಂಗಣ್ಣ ಕರಡಿ ಮಾತನಾಡಿ, ವಿಜಯ ಸಂಕಲ್ಪ ಯಾತ್ರೆ ಹೊಸ ಇತಿಹಾಸ ಸೃಷ್ಟಿಸಲಿದೆ. ಕಾಂಗ್ರೆಸ್, ಅಭಿವೃದ್ಧಿ ವಿರೋಧಿ ಪಕ್ಷ. ಕೊಪ್ಪಳ ಏತ ನೀರಾವರಿ ಯೋಜನೆಗೆ ನಯಾಪೈಸೆ ಅನುದಾನ ನೀಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೆರೆ ತುಂಬಿಸುತ್ತಿದ್ದೇವೆ. ಶಾಸಕ ರಾಘವೇಂದ್ರ ಹಿಟ್ನಾಳ್ ಸಿಂಗಟಾಲೂರು ಏತ ನೀರಾವರಿಗೆ ಅನುದಾನ ತರಲಿಲ್ಲ. ಈಗ ನಮ್ಮ ಸರ್ಕಾರ ಅನುದಾನ ಮೀಸಲಿರಿಸಿ ಟೆಂಡರ್ ಕರೆದಿದೆ. ರಾಜ್ಯ ಅಭಿವೃದ್ಧಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಆಶೀರ್ವಾದ ಬೇಡಿದರು. ಈ ವೇಳೆ ಸಂಗಣ್ಣ ಅಭಿಮಾನಿಗಳು ಮುಂದಿನ ಶಾಸಕ ಸಂಗಣ್ಣ ಎಂದು ಕೂಗಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿದರು. ಸಚಿವ ಹಾಲಪ್ಪ ಆಚಾರ್, ಶಾಸಕ ಪರಣ್ಣ ಮುನವಳ್ಳಿ, ವಿಪ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಹೇಮಲತಾ ನಾಯಕ, ಸಂಚಾಲಕರಾದ ಸಿದ್ದರಾಜು, ಸಿದ್ದೇಶ ಯಾದವ, ಸಿ.ವಿ.ಚಂದ್ರಶೇಖರ್, ಚಂದ್ರು ಪಾಟೀಲ್ ಹಲಗೇರಿ, ಅಮರನಾಥ ಪಾಟೀಲ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮುಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ, ನಗರ ಘಟಕ ಅಧ್ಯಕ್ಷ ಸುನೀಲ್ ಹೆಸರೂರು, ಶೋಭಾ ನಗರ, ಮಹಾಲಕ್ಷ್ಮೀ ಕಂದಾರಿ, ವಿರೂಪಾಕ್ಷಪ್ಪ ಸಿಂಗನಾಳ, ಎಚ್.ಗಿರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net