

ತುಮಕೂರು: ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುವ ಪುಣ್ಯ ನನಗೆ ಸಿಕ್ಕಿತ್ತು, ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಸಾವಿರಾರು ಯೋಧರಿಗೆ ದೇಶವಾಸಿಗಳು ಋಣಿಯಾಗಿರಬೇಕು ಎಂದು ನಿವೃತ್ತ ಯೋಧ ವೆಂಕರಮಣಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು ವಿವಿ ಮುಂಭಾಗ ಭಗತ್ ಕ್ರಾಂತಿ ಸೇನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ವಿಜಯ್ ದಿವಸ್’ ಸಾಂಕೇತಿಕ ಆಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಾರೆ, ಅವರ ಸೇವೆ, ತ್ಯಾಗವನ್ನು ಸದಾ ಸ್ಮರಿಸುವ ಕೆಲಸವಾಗಬೇಕು, ಸಾಧ್ಯವಾದರೆ ನಿಮ್ಮ ಮಕ್ಕಳನ್ನೂ ಸೈನ್ಯಕ್ಕೆ ಸೇರಿಸಿ ದೇಶಸೇವೆಗೆ ಕಳುಹಿಸಬೇಕು ಎಂದರು. ಭಾರತೀಯ ಸೈನ್ಯ ಸೇರಬಯಸುವ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ರಕ್ಷಣಾ ಇಲಾಖೆ ನೀಡುತ್ತಿದೆ, ಯುವಕರು ಪೂರ್ವಸಿದ್ಧತೆ ಮಾಡಿಕೊಂಡು ಸೈನ್ಯಕ್ಕೆ ಸೇರಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ದೇಶದ ಇತಿಹಾಸದಲ್ಲಿ ದಾಖಲಾಗಿರುವ ಯುದ್ಧಗಳಲ್ಲಿ ಸಾವಿರಾರು ಯೋಧರು ತ್ಯಾಗ, ಬಲಿದಾನ ಮಾಡುತ್ತಿದ್ದಾರೆ. ದೇಶದಲ್ಲಿ ಯೋಧರ ಬಗ್ಗೆ ವಿಶೇಷ ಗೌರವವಿದ್ದು ಅವರ ತ್ಯಾಗ ಸ್ಮರಿಸುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ನಮ್ಮ ದೇಶ ಇಲ್ಲಿಯವರೆಗೂ ಗಡಿಗಳಲ್ಲಿ ನಡೆದ ಯುದ್ಧಗಳಲ್ಲಿ ವಿಜಯ ಸಾಧಿಸಿದ ನೆನಪನ್ನು ಹಾಗೂ ದೇಶದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ದುಷ್ಟ ಶಕ್ತಿಗಳ ವಿರುದ್ದ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರ ಪೊಲೀಸರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಜಯ್ ದಿವಸ್ ಆಚರಿಸಲಾತು.
ದೇಶಕ್ಕಾಗಿ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿ ವಿಜಯಕ್ಕೆ ಕಾರಣರಾದ ವೀರಯೋಧರು ಹಾಗೂ ವೀರ ಪೋಲೀಸರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಲಾಯಿತು.ಭಗತ್ ಕ್ರಾಂತಿ ಸೇನೆ ವತಿಯಿಂದ ಪ್ರತಿವರ್ಷ ನೀಡಲಾಗುವ ‘ವೀರ ಯೋಧ’ ಬಿರುದನ್ನು ಮಾಜಿ ಯೋಧ ವೆಂಕಟರಮಣ ಸ್ವಾಮಿ ಅವರಿಗೆ ನೀಡಲಾತು. ಭಗತ್ ಕ್ರಾಂತಿಸೇನೆ ಕಾರ್ಯಕರ್ತರಾದ ಚೇತನ್, ರಾಧಾಕೃಷ್ಣ, ಆರಾಧ್ಯ, ಪುನೀತ್, ಅಭಿ, ರಾಕೆಶ್, ರಾಜು, ಶಶಿ ಇದ್ದರು.