ರೈಲು ದುರಂತ ತಪ್ಪಿಸಿದ ಜಾಗೃತ ಹಳಿನಿರ್ವಾಹಕ

udp-26-railway
Published on

ಉಡುಪಿ: ಇನ್ನಂಜೆ ಹಾಗೂ ಪಡುಬಿದ್ರಿಯ ನಡುವೆ ಕೊಂಕಣ ರೈಲು ಮಾರ್ಗದಲ್ಲಿ ಹಳಿಯ ಜೋಡಣೆ ತಪ್ಪಿರುವುದನ್ನು ಜಾಗೃತ ಹಳಿ ನಿರ್ವಾಹಕ ಪತ್ತೆ ಹಚ್ಚಿದ್ದು, ಸಂಭಾವ್ಯ ದುರಂತ ತಪ್ಪಿಸಿದ್ದಾರೆ.

ಜಾಗೃತ ಹಳಿ ನಿರ್ವಾಹಕ (ಟಿಎಂ) ಪ್ರದಿಪ್​ ಶೆಟ್ಟಿ ಭಾನುವಾರ ಮುಂಜಾನೆ 2.25ರ ಸುಮಾರಿಗೆ ಇನ್ನಂಜೆ ಹಾಗೂ ಪಡುಬದ್ರಿ ನಡುವೆ ರೈಲ್ವೆ ಹಳಿಯಲ್ಲಿ ಹಳಿ ಜೋಡಣೆ ಜಾರಿರುವುದನ್ನು ಪತ್ತೆ ಹಚ್ಚಿದ್ದರು. ತಕ್ಷಣ ಈ ಬಗ್ಗೆ ಉಡುಪಿ ಆರ್​ಎಂಇ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ತೆರಳಿದ ರೈಲ್ವೇ ಸಿಬ್ಬಂದಿ ಮೂರು ಗಂಟೆ ದುರಸ್ತಿ ಕಾರ್ಯ ನಡೆಸಿದ್ದಾರೆ. ಈ ನಡುವೆ ಮುಂಬೈಯಿಂದ ಬಂದ ನೇತ್ರಾವತಿ ಎಕ್ಸ್​ಪ್ರೆಸ್​ನ್ನು ಉಡುಪಿಯಲ್ಲಿ ಹಾಗೂ ಬೆಂಗಳೂರಿಂದ ಕಾರವಾರಕ್ಕೆ ತೆರಳುತ್ತಿದ್ದ ಪಂಚಗಂಗಾ ಎಕ್ಸ್​ಪ್ರೆಸ್​ನ್ನು ಸುರತ್ಕಲ್​ನಲ್ಲಿ ತಡೆ ಹಿಡಿಯಲಾಯಿತು. ದುರಸ್ಥಿಯ ಬಳಿಕ ಈ ರೈಲುಗಳು ಮೂರು ಗಂಟೆಗಳ ವಿಳಂಬವಾಗಿ ಸಂಚಾರವನ್ನು ಪುನರಾರಂಭಿಸಿದವು.

ಬಹುಮಾನ ಘೋಷಣೆ
ಜಾಗೃತ ಹಳಿ ನಿರ್ವಾಹಕ ಪ್ರದಿಪ್​ ಶೆಟ್ಟಿ ಅವರು ಮಧ್ಯರಾತ್ರಿ ಕತ್ತಲಲ್ಲಿ ಹಳಿ ಜಾಯಿಂಟ್​ ತಪ್ಪಿರುವುದನ್ನು ಪತ್ತೆ ಹಚ್ಚಿರುವುದಕ್ಕಾಗಿ ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷ್​ ಕುಮಾರ್​ ಝಾ ಅವರು 25,000 ರೂ. ನಗದು ಬಹುಮಾನ ಘೋಷಿಸಿದ್ದು, ಅದರಂತೆ ಸೀನಿಯರ್​ ಇಂಜಿನಿಯರ್​ ಗೋಪಾಲಕೃಷ್ಣ ದುರಸ್ತಿ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಬಹುಮಾನ ಚೆಕ್​ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿ ಸೆಕ್ಷನ್​ ಇಂಜಿನಿಯರ್​ ಮೋಹನ್​, ಸುರತ್ಕಲ್​ ಸ್ಟೇಶನ್​ನ ಸುಪರಿಂಟೆಂಡೆಂಟ್​ ರವಿರಾಜ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net