ನೈಋತ್ಯ ರೈಲ್ವೆಯಿಂದ ವಿಜಿಲೆನ್ಸ್ ಜಾಗೃತಿ ಸಪ್ತಾಹ

New SWR New
Published on

ಹುಬ್ಬಳ್ಳಿ : ವಿಜಿಲೆನ್ಸ್ ಜಾಗೃತಿ ಸಪ್ತಾಹ ಉದ್ಘಾಟನೆ ಕಾರ್ಯಕ್ರಮವನ್ನು ಇಲ್ಲಿನ ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ ರೈಲ್ ಸೌಧದಲ್ಲಿ ಸೋಮವಾರ ಏರ್ಪಡಿಸಲಾಗಿತ್ತು.

ವಿಜಿಲೆನ್ಸ್ : ನಮ್ಮ ಹಂಚಿಕೆಯ ಜವಾಬ್ದಾರಿ ಎಂಬ ಘೋಷವಾಕ್ಯದೊಂದಿಗೆ ಅ. 27 ರಿಂದ ನ. 2 ರಿಂದ ದೇಶದಾದ್ಯಂತ ವಿಜೆಲೆನ್ಸ್ ಜಾಗೃತಿ ಸಪ್ತಾಹ ನಡೆಯಲಿದೆ.

ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ ಮಾತನಾಡಿ, ಭ್ರಷ್ಟಾಚಾರದ ದುಷ್ಪರಿಣಾಮಗಳಿಂದಾಗಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿಯಾಗುತ್ತದೆ ಎಂದರು.

ನೌಕರರು, ಪಾಲುದಾರರು ಹಾಗೂ ನಾಗರಿಕರು ನಿತ್ಯದ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಮಗ್ರತಾ ಪ್ರತಿಜ್ಞೆ ಬೋಧಿಸಿದರು. ನಂತರ ವಿಜಿಲೆನ್ಸ್ ಜಾಗೃತಿ ವಿಷಯಾಧಾರಿತ ಪೋಸ್ಟರ್​ಗಳನ್ನು ಅನಾವರಣಗೊಳಿಸಿದರು.

ನೈಋತ್ಯ ರೈಲ್ವೆಯ ಹಿರಿಯ ಉಪ ಮಹಾಪ್ರಬಂಧಕ ಹಾಗೂ ಮುಖ್ಯ ಜಾಗೃತ ಅಧಿಕಾರಿ ಎ. ಅಣ್ಣಾದುರೈ ಅವರು 2025ರ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ವಲಯದಾದ್ಯಂತ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ರೈಲ್ ಸೌಧದ ಇಂಟೆಗ್ರಿಟಿ ಗಾರ್ಡನ್​ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಸಿ ನೆಡಲಾಯಿತು.

ವಾರದ ಕಾರ್ಯಕ್ರಮಗಳ ಅಂಗವಾಗಿ ರೈಲ್ವೆ ಕ್ರಿಕೆಟ್ ಮೈದಾನದಿಂದ ಎಸ್​ಎಸ್​ಎಸ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ವಿಜಿಲೆನ್ಸ್ ಜಾಗೃತಿ ವಾಕಥಾನ್ ಆಯೋಜಿಸಲಾಗಿತ್ತು.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net