

ವೆಂಕಟೇಶ ಗುಡೆಪ್ಪನವರ ಮುಧೋಳ
ತಾಲೂಕಿನ ಮಂಟೂರ ಸಿದ್ಧಾರೂಢ ಬ್ರಹನ್ಮಠದ ಸದಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ಉಪವಾಸವಿದ್ದ ಭಕ್ತರಿಗೆ ಪ್ರತ್ಯೇಕ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತಾದಿಗಳು ಜಾಗರಣೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.
ತಾಲೂಕಿನ ಮಂಟೂರದಲ್ಲಿರುವ ಶಿವನ ವಿಗ್ರಹವು ವಿಶಾಲವಾದ ಹಾಗೂ ಎತ್ತರವಾದ ವಿಗ್ರಹ ಎಂಬ ಹೆಗ್ಗಳಿಕೆ ಹೊಂದಿದ್ದು, ದೇಶದಲ್ಲಿಯೇ ತೃತೀಯ ಸ್ಥಾನದಲ್ಲಿದೆ. ಮೊದಲನೆಯದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಎರಡನೆಯದು ವಿಜಯಪುರದ ಶಿವಗಿರಿಯಲ್ಲಿದೆ.
ಮಂಟೂರ ಗ್ರಾಮದ ರಸ್ತೆ ಬದಿಯ ಕೆರೆಯ ಮಧ್ಯದಲ್ಲಿರುವ ಶಿವನ ಮೂರ್ತಿ ಪ್ರವಾಸಿಗರ ಆಕರ್ಷಿಸುತ್ತಿದೆ. ಇದು ಮುಧೋಳದಿಂದ 9 ಕಿಮೀ ದೂರದಲ್ಲಿ ಸ್ಥಿತವಾಗಿ ಕುಳಿತಿರುವ ಭಂಗಿಯಲ್ಲಿದೆ. ಒಟ್ಟು 108 ಅಡಿ ಎತ್ತರವಿರುವ ಶಿವನಮೂರ್ತಿಯನ್ನು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಸಿದ್ಧಾರೂಢ ಧಾಮ ನಿರ್ಮಾತೃ ಸಿದ್ಧಾರೂಢ ಬ್ರಹನ್ಮಠದ ಸದಾನಂದ ಮಹಾಸ್ವಾಮಿಗಳು ನಿರ್ಮಿಸಿದ್ದಾರೆ.
ಮುರುಡೇಶ್ವರ ಮಾದರಿಯಲ್ಲಿ ಅಂದಾಜು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರಿಟ್‌ನಿಂದ ನಿರ್ಮಾಸಿದ್ದು, 2008ರಲ್ಲಿ ಪ್ರತಿಷ್ಠಾಪನೆಗೊಂಡಿತು. ಶಿವನ ದೇವಸ್ಥಾನದ ಎದುರಿನಲ್ಲೇ 15 ಅಡಿ ಎತ್ತರ ಹಾಗೂ 25 ಅಡಿ ಉದ್ದದ ಆಕರ್ಷಕ ನಂದಿ ವಿಗ್ರಹವಿದೆ.