

ಚಿದಾನಂದ ಮಾಣೆ ರಟ್ಟಿಹಳ್ಳಿ
ಪಟ್ಟಣ ಸೇರಿದಂತೆ ಗ್ರಾಮಗಳನ್ನು ಬಯಲು ಶೌಚಮುಕ್ತಗೊಳಿಸಲು ಸರ್ಕಾರ ವಿವಿಧ ಯೋಜನೆಯಡಿ ಅನುದಾನ ಒದಗಿಸುತ್ತದೆ. ಆದರೆ, ತಾಲೂಕು ಕೇಂದ್ರ ರಟ್ಟಿಹಳ್ಳಿಯಲ್ಲಿ ಸಾರ್ವಜನಿಕ ಶೌಚಗೃಹವಿಲ್ಲದ ಕಾರಣ ಪಟ್ಟಣಕ್ಕೆ ಆಗಮಿಸುವ ಜನರು ಹೊರವಲಯದ ಕೆರೆ ಅವಲಂಬಿಸಬೇಕಾಗಿದೆ. ಇನ್ನು ಮಹಿಳೆಯರ ಪರದಾಟ ಅಷ್ಟಿಷ್ಟಲ್ಲ.
63 ಗ್ರಾಮಗಳ ವ್ಯಾಪ್ತಿಯ ರಟ್ಟಿಹಳ್ಳಿ ನೂತನ ತಾಲೂಕು ಕೇಂದ್ರವಾಗಿ 3 ವರ್ಷಗಳೇ ಗತಿಸಿವೆ. ತಾಲೂಕು ಕೇಂದ್ರಕ್ಕೆ ವಿವಿಧ ಗ್ರಾಮಗಳ ಜನರು ಶಿಕ್ಷಣ, ಬ್ಯಾಂಕ್, ತಹಸೀಲ್ದಾರ್ ಕಚೇರಿ, ಆಸ್ಪತ್ರೆ, ವಾಣಿಜ್ಯ ಚಟುವಟಿಕೆ ಮತ್ತಿತರ ಕಾರ್ಯಗಳಿಗಾಗಿ ಆಗಮಿಸುತ್ತಾರೆ. ಆದರೆ, ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹವಿಲ್ಲದ್ದರಿಂದ ತೊಂದರೆ ಅನುಭವಿಸುವಂತಾಗಿದೆ.
ಕಾಮಗಾರಿ ಸ್ಥಗಿತ: ಹಳೇ ಬಸ್ ನಿಲ್ದಾಣ ಸಮೀಪದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಸಾರ್ವಜನಿಕ ಶೌಚಗೃಹ ಶಿಥಿಲಗೊಂಡಿತ್ತು. ಪಪಂ ವಾಣಿಜ್ಯ ಮಳಿಗೆ ನಿರ್ವಣಕ್ಕಾಗಿ ಅದನ್ನು ತೆರವು ಮಾಡಲಾಯಿತು. ನಂತರ ಆ ಸ್ಥಳದಲ್ಲಿ ಸ್ವಚ್ಛ ಭಾರತ ಮಿಷನ್ ಅಭಿಯಾನ ಯೋಜನೆಯಡಿ 3.60 ಲಕ್ಷ ರೂ. ವೆಚ್ಚದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗುತ್ತಿದೆ. ಕಾಮಗಾರಿ ಶೇ. 90ರಷ್ಟಾಗಿದೆ. ಇನ್ನುಳಿದ ಕಾಮಗಾರಿ ಅನುದಾನ ಕೊರತೆಯಿಂದಾಗಿ ಸ್ಥಗಿತವಾಗಿದೆ. ಇನ್ನುಳಿದ ಕಾಮಗಾರಿಗಾಗಿ ಪಪಂನಿಂದ 14ನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
ಸಂತೆಗೆ ಬಂದವರಿಗೆ ಚಿಂತೆ: ಪಟ್ಟಣದ ಕಾರಂಜಿ ವೃತ್ತ, ಹಳೇ ಬಸ್ ನಿಲ್ದಾಣ, ತುಮ್ಮಿನಕಟ್ಟೆ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಪ್ರತಿ ಶುಕ್ರವಾರ ಸಂತೆಯಾಗುತ್ತದೆ. ಸಂತೆಗೆ ನೂರಾರು ವ್ಯಾಪಾರಸ್ಥರು, ಗ್ರಾಹಕರು ಆಗಮಿಸುತ್ತಾರೆ. ಸಂತೆ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಗೃಹವಿಲ್ಲದ್ದರಿಂದ ಜನರು ಅಕ್ಕಪಕ್ಕದ ಮನೆ ಮುಂಭಾಗದ ಬಯಲು ಜಾಗ ಬಳಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮನೆಯವರಿಂದ ಶೌಚ ಮಾಡಿದವರು ತರಾಟೆಗೊಳಗಾಗಿ ಗಲಾಟೆಗಳಾದ ಉದಾಹರಣೆಗಳಿವೆ. ಇನ್ನು ಮಹಿಳೆಯರು ಅನುಭವಿಸುವಂಥ ವೇದನೆ ಹೇಳತೀರದು. ಕಾಮಗಾರಿ ಬೇಗ ಪೂರ್ಣವಾದರೆ ಅಲೆದಾಡುವುದು ತಪ್ಪುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಎಲ್ಲೆಲ್ಲಿ ಅವಶ್ಯ?: ಜನನಿಬಿಡ ಪ್ರದೇಶಗಳಾದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಭಗತಸಿಂಗ್ ವೃತ್ತ, ದುರ್ಗಾದೇವಿ ನಗರ, ಶಿವಾಜಿ ನಗರ, ಸಂತೆ ಮಾರುಕಟ್ಟೆ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳ ಅವಶ್ಯಕತೆಯಿದೆ. ಆದರೆ, ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹ ಇರುವುದು ಹೊಸ ಬಸ್ ನಿಲ್ದಾಣದಲ್ಲಿ ಮಾತ್ರ. ಹಳೇ ಬಸ್ ನಿಲ್ದಾಣಕ್ಕೂ ಮತ್ತು ಹೊಸ ಬಸ್ ನಿಲ್ದಾಣಕ್ಕೂ ಒಂದು ಕಿಲೋ ಮೀಟರ್ ಅಂತರವಿದೆ. ಹೀಗಾಗಿ, ಜನರು ಶೌಚಕ್ಕಾಗಿ ಪಟ್ಟಣದ ಹೊರವಲಯದ ಕೆರೆ ಪ್ರದೇಶವನ್ನು ಬಳಸುತ್ತಿದ್ದಾರೆ. ಇದರಿಂದ ಕೆರೆ ಮತ್ತು ಪರಿಸರ ಮಾಲಿನ್ಯವಾಗುತ್ತಿದೆ. ಅಲ್ಲದೆ, ಸರ್ಕಾರದ ಬಯಲು ಬಹಿರ್ದೆಸೆ ಮುಕ್ತ ಯೋಜನೆಗೆ ಹಿನ್ನಡೆಯಾಗಿದೆ.
ರಟ್ಟಿಹಳ್ಳಿಯಲ್ಲಿ ಶೌಚಗೃಹ ಕಾಮಗಾರಿ ಅಪೂರ್ಣವಾದ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ವಾರದಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ. ಬೇಗನೆ ಕಾಮಗಾರಿ ಮುಗಿಸಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚು ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ ನಿವೇಶನ, ಅನುದಾನ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.| ಉಮೇಶ ಗುಡ್ಡದ, ರಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ