ಬಯಲುಸೀಮೆಯಲ್ಲಿ ವಿಯೆಟ್ನಾಂ ತೋಟ!

Vietnam
Published on

| ಮಂಜು ಬನವಾಸೆ ಹಾಸನ

ರಾಗಿ, ಜೋಳ ಬೆಳೆಯಲು ಅನುಕೂಲವಿರುವ ಒಣಹವೆ ಭೂಮಿಯಲ್ಲಿ ಪದವೀಧರ ರೈತರೊಬ್ಬರು ಮಲೆನಾಡಿಗರೂ ಹುಬ್ಬೇರುವಂತೆ ಕಾಳುಮೆಣಸು ತೋಟ ನಿರ್ವಿುಸಿ ಇತಿಹಾಸ ಸೃಷ್ಟಿಸಿದ್ದಾರೆ.

ಸಕಲೇಶಪುರ ತಾಲೂಕಿನ ಕೋಗೋಡಿನ ತಮ್ಮ ಅತ್ತೆಯ ಮನೆಗೆ ಹೋಗಿದ್ದ ವೇಳೆ ಅಲ್ಲಿನ ಬೆಳೆದಿದ್ದ ಸಿಲ್ವರ್ ಓಕ್ ಮರಗಳನ್ನು ನೋಡಿ ಅದೇ ರೀತಿ ಹೊಳೆನರಸೀಪುರ ತಾಲೂಕು ಮೋಟನಾಯಕನಹಳ್ಳಿಯಲ್ಲಿರುವ ತಮ್ಮ ಹೊಲಕ್ಕೆ ಸಸಿಗಳನ್ನು ಹಾಕಿ ಬಿಟ್ಟರೆ ಬೇರೆ ಕೃಷಿ ಮಾಡುವ ಅಗತ್ಯ ಬೀಳುವುದಿಲ್ಲ ಎಂದು ಆಲೋಚಿಸಿ, ಅಂತೆಯೇ 2009ರಲ್ಲಿ 1300 ಸಿಲ್ವರ್ ಓಕ್ ಸಸಿ ನೆಟ್ಟರು. ನಾಲ್ಕೇ ವರ್ಷದಲ್ಲಿ ನಿರೀಕ್ಷೆಗಿಂತಲೂ ಎತ್ತರಕ್ಕೆ ಬೆಳೆದುನಿಂತ ಸಿಲ್ವರ್ ಓಕ್ ಮರಗಳನ್ನು ನೋಡಿ ಮರಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನೇಕೆ ಹಬ್ಬಿಸಬಾರದು ಎನ್ನುವ ಯೋಚನೆ ಮೊಳೆಯಿತು. ಬಯಲುಸೀಮೆಯಲ್ಲಿ ಮೆಣಸು ಬೆಳೆಯಲು ಸಾಧ್ಯವಿಲ್ಲ ಎನ್ನುವ ಅನುಭವಿಗಳ ಎಚ್ಚರಿಕೆ, ಸಲಹೆಗಳನ್ನು ಕಡೆಗಣಿಸಿ ಮೆಣಸಿನ ಗಿಡಗಳನ್ನು ಎಲ್ಲ ಮರಗಳ ಬುಡಗಳಲ್ಲಿ ನೆಟ್ಟರು. ಮೂರೇ ವರ್ಷಗಳಲ್ಲಿ ಮೆಣಸಿನ ಬಳ್ಳಿ ಮರಗಳನ್ನು ತಬ್ಬಿ ಬೆಳೆದು ನಿಂತು ಚೊಚ್ಚಲ ಕಾಳು ಕಟ್ಟಿದವು.

ಮೊದಲ ವರ್ಷ 4 ಕ್ವಿಂಟಾಲ್ ಮೆಣಸು ಕೊಯ್ಲು ಮಾಡಿದ ಅವರು, ತಮ್ಮ ಭೂಮಿಯನ್ನು ಕಾಫಿ ತೋಟವಾಗಿ ಪರಿವರ್ತಿಸಲು ತೀರ್ವನಿಸಿ ಖಾಲಿ ಉಳಿದ ಸ್ಥಳದಲ್ಲಿ ಸಾಲು ಹಿಡಿದು ಅರೇಬಿಕಾ ಕಾಫಿ ಗಿಡಗಳನ್ನು ನೆಟ್ಟರು. 2019ರಲ್ಲಿ 2.5 ಟನ್ ಮೆಣಸು ಕೊಯ್ಲು ಮಾಡಿದ ಅವರು ಪ್ರಸಕ್ತ ವರ್ಷ ಶುಂಠಿಕೊಪ್ಪ ಮೂಲದ ವರ್ತಕರೊಬ್ಬರಿಗೆ 12 ಲಕ್ಷ ರೂ. ಮೊತ್ತಕ್ಕೆ ಕಾಳು ಮೆಣಸು ಫಸಲು ಮಾರಾಟ ಮಾಡಿದ್ದಾರೆ. ಇದರ ನಡುವೆ ಪ್ರತಿ ವರ್ಷ ಸರಾಸರಿ 70 ಚೀಲ ಕಾಫಿ ಫಸಲು ದೊರೆಯಲಾರಂಭಿಸಿದೆ. ವಾರ್ಷಿಕ 2 ಲಕ್ಷ ರೂ. ನಿರ್ವಹಣೆಗಾಗಿ ವೆಚ್ಚ ಮಾಡುತ್ತಿರುವ ಅವರು 13-15 ಲಕ್ಷ ರೂ. ಆದಾಯ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಗುರುಪಾದಸ್ವಾಮಿ ಅವರ ತೋಟದಲ್ಲಿನ ಮೆಣಸಿನ ಬಳ್ಳಿ ಮೂವತ್ತು ಅಡಿಗಳಷ್ಟು ಎತ್ತರಕ್ಕೆ ತಲುಪಿದ್ದು, ಎರಡು ಸಾಲುಗಳ ನಡುವೆ ನಡೆದಾಡುವುದು ವಿಯೆಟ್ನಾಂನಲ್ಲಿನ ತೋಟಗಳಲ್ಲಿ ಓಡಾಡಿದ ರಮ್ಯ ಅನುಭವ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net