

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡಿ ದೇಶದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆ ವೇಣೂರಿನ ವಿದ್ಯೋದಯ ವಿದ್ಯಾಸಂಸ್ಥೆಗಳ ಆಡಳಿತ ವಹಿಸಿಕೊಂಡಿದೆ.
ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಸಮರ್ಪಿಸಿದ ವೇಣೂರಿನ ವಿದ್ಯೋದಯ ವಿದ್ಯಾಸಂಸ್ಥೆಗಳಲ್ಲಿ ಎಲ್‌ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ನಡೆಯುತ್ತಿವೆ. ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿವೆ. 247 ಬಿಸಿ ನೀರಿನ ವ್ಯವಸ್ಥೆಯಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯವಿದೆ. ಒಂದು ಕಾಲದಲ್ಲಿ ಇಲ್ಲಿನ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ ನಾಡಿನಲ್ಲೇ ಹೆಸರಾಗಿದ್ದವು ಎಂದು ತಿಳಿಸಿದರು. ತನ್ನ ತಂದೆ ಬೊಳ್ಳೂರು ಗುತ್ತು ಸತೀಶ್ ಕುಮಾರ್ ಆರಿಗ ಅವರು ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳಲ್ಲಿ ಓದಿರುವುದನ್ನು ಸ್ಮರಿಸಿಕೊಂಡರು.
ವೇಣೂರಿನ ವಿದ್ಯೋದಯ ವಿದ್ಯಾಸಂಸ್ಥೆ ಶ್ರೇಷ್ಠ ವಿದ್ಯಾಕೇಂದ್ರವಾಗಿತ್ತು. ನನ್ನ ತಂದೆ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ವಿದ್ಯೋದಯ ವಿದ್ಯಾಸಂಸ್ಥೆಗಳಲ್ಲಿ ಓದಿದ್ದರು. ಎಕ್ಸೆಲ್ ವೇಣೂರಿನಲ್ಲಿ ಎಲ್‌ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಗಳನ್ನು ಮುನ್ನಡೆಸುವುದರ ಜತೆಗೆ ಗತ ವೈಭವದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಪ್ರೌಢಶಾಲೆಯನ್ನು ಪುನರಾರಂಭಿಸಿ, ರಾಜ್ಯದ ಉನ್ನತ ಶಾಲೆಯನ್ನಾಗಿ ರೂಪಿಸಲಾಗುವುದು. ನಾಡು, ನುಡಿ, ನೆಲ, ಜಲದ ಬಗೆಗೆ ಸದಾ ಜಾಗೃತವಾಗಿರುವ ಎಕ್ಸೆಲ್ ವಿದ್ಯಾಸಂಸ್ಥೆ ಗೊಮ್ಮಟೇಶ್ವರ ನೆಲೆನಿಂತ ವೇಣೂರಿನಲ್ಲಿ ರಾಜ್ಯದ ಶ್ರೇಷ್ಠ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯನ್ನು ಸ್ಥಾಪಿಸಿ ಪ್ರತಿಭಾವಂತರಿಗೆ ಉಚಿತ ಶಿಕ್ಷಣ ಕೊಡುವ ಇರಾದೆ ಹೊಂದಿದೆ ಎಂದರು.