ಆರ್ಥಿಕ ವಂಚನೆಗಳ ಬಗ್ಗೆ ಎಚ್ಚರ ಅಗತ್ಯ: ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್

Vidyavardhaka College of Engineering
Published on

ಮೈಸೂರು: ಆಧುನಿಕ ಯುಗದಲ್ಲಿ ನಡೆಯುವ ಆರ್ಥಿಕ ವಂಚನೆಗಳ ಕುರಿತು ಜನರು ಎಚ್ಚರಿಕೆಯಿಂದ ಇರಬೇಕು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹುಲುವಾಡಿ ಜಿ. ರಮೇಶ್ ಹೇಳಿದರು.

ಗೋಕುಲಂ 3ನೇ ಹಂತದ ವಿದ್ಯಾವರ್ಧಕ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ‘ಭಾರತೀಯ ಬ್ಯಾಂಕಿಂಗ್ ಕ್ಷೇತ್ರ: ಭೂತ, ವರ್ತಮಾನ ಮತ್ತು ಭವಿಷ್ಯ’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಬ್ಯಾಂಕ್‌ನಲ್ಲಿ ಜನರು ಇಟ್ಟಿರುವ ಹಣವನ್ನು ಸಂರಕ್ಷಿಸುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಇದರ ಜತೆಗೆ ಗ್ರಾಹಕರು ಸಹ ಜಾಗೃತರಾಗಿ ಬ್ಯಾಂಕ್ ಖಾತೆಯನ್ನು ಆಗಿಂದಾಗೆ ಪರಿಶೀಲಿಸಿಕೊಳ್ಳಬೇಕು. ವಂಚನೆಗಳು ಆದರೆ ತಕ್ಷಣ ಬ್ಯಾಂಕ್‌ನವರ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಗ್ರಾಹಕರ ಹಣ ನಿರ್ವಹಣೆ ಮಾಡುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದ್ದು, ಗ್ರಾಹಕರ ಹಣಕ್ಕೆ ಅವರು ಉತ್ತರದಾಯಿಯಾಗಿದ್ದಾರೆ. ಬ್ಯಾಂಕ್‌ನಿಂದ ಯಾವುದೇ ರೀತಿಯ ತಪ್ಪುಗಳು ಆದರೆ ಜನರು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಮಾತನಾಡಿ, ಭಾರತೀಯ ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಸುಭದ್ರವಾಗಿದ್ದು, ಅತ್ಯಾಧುನಿಕವಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಡಿಜಿಟಲೀಕರಣ ಕ್ರಾಂತಿಯನ್ನು ಉಂಟು ಮಾಡಿದ್ದು, ಸಣ್ಣ ಗ್ರಾಹಕ ಸಹ ಡಿಜಿಟಲ್ ವಹಿವಾಟು ನಡೆಸುವ ಅವಕಾಶವನ್ನು ಕಲ್ಪಿಸಿದೆ. ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಪ್ರಾಧ್ಯಾಪಕರಾದ ಡಾ.ಪಿಎಸ್‌ವಿ ಬಾಲಾಜಿ ರಾವ್, ಡಾ.ಜೆ. ಮಾದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net