

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡಿಗರ ಶಕ್ತಿ ಕೇಂದ್ರವಾದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡಿನ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಸಂವರ್ಧನೆಗೆ ನಿರಂತರವಾಗಿ ಸಾರ್ಥಕ ಸೇವೆ ನೀಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದು ಚಿಂತಕ ಡಾ. ಲೋಹಿತ ನಾಯ್ಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಸಮಾರೋಪ ಹಾಗೂ ಜತ್ತ ತಾಲೂಕಿನ ವಜ್ರವಾಡದ ಗಡಿ ಕನ್ನಡ ಶಾಲೆಗೆ ಸಂಘದ ಪರ ನೆರವು ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಕ್ಕೆ ಸುದೀರ್ಘ ಇತಿಹಾಸವಿದ್ದು, ಕನ್ನಡಿಗರ ಹೃದಯದಲ್ಲಿ ಕನ್ನಡತ್ವದ ಬಗ್ಗೆ ಅಭಿಮಾನ ಹಾಗೂ ಜಾಗೃತಿ ಮೂಡಿಸುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ನಾಡು-ನುಡಿ ಕುರಿತು ಅಭಿಮಾನ ಹೆಚ್ಚಿಸಿಕೊಳ್ಳಬೇಕು. ಈ ವರ್ಷದ ನಾಡ ಹಬ್ಬದ ತಿಂಗಳ ಕಾರ್ಯಕ್ರಮದಲ್ಲಿ ಸುಮಾರು 25000 ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕರ್ನಾಟಕದ ಭವ್ಯ ಇತಿಹಾಸ ಸಾರುವ ವಿಶೇಷ ಉಪನ್ಯಾಸ ಏರ್ಪಡಿಸಿದ್ದು ದಾಖಲೆ ನಿರ್ಮಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ನಾಡಹಬ್ಬದ ತಿಂಗಳ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಯುವಕರಿಗೆ, ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಕಾರ್ಯಕ್ರಮ ಮನೋಜ್ಞವಾಗಿ ಮೂಡಿಬಂದವು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ವಜ್ರವಾಡದ ಗಡಿಕನ್ನಡ ಶಾಲೆಗೆ ಕ.ವಿ.ವ. ಸಂಘದ ಪರವಾಗಿ ನೆರವು ನೀಡಲಾಯಿತು. ಜನಮೆಚ್ಚುಗೆ ಪಡೆದ ಮೂರು ನಾಟಕಗಳಿಗೆ ಪ್ರಕಾಶ ಮುಳಗುಂದ ನಗದು ಬಹುಮಾನ ನೀಡಿ, ಕಲಾವಿದರಿಗೆ ಪ್ರೋತ್ಸಾಹಿಸಲಾಯಿತು. ವಜ್ರವಾಡದ ಗಡಿ ಕನ್ನಡ ಶಾಲೆ ಮುಖ್ಯಾಧ್ಯಾಪಕ ವೀರನಗೌಡ ಪಾಟೀಲ ಮಾತನಾಡಿದರು.
ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಶಂಕರ ಕುಂಬಿ, ಡಾ. ಮಹೇಶ ಹೊರಕೇರಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಪ್ರಕಾಶ ಬಾಳಿಕಾಯಿ, ಎಂ.ಎಂ. ಚಿಕ್ಕಮಠ, ಯು.ಎಸ್. ಕುನ್ನಿಭಾವಿ, ಡಾ. ವಿಶ್ವನಾಥ ಚಿಂತಾಮಣಿ, ಡಾ. ಶಿವಾನಂದ ಟವಳಿ, ಕೆ.ಜಿ. ದೇವರಮನಿ, ಜಿ.ಬಿ. ಸಜ್ಜನ, ಪುಷ್ಪಾ ಹಿರೇಮಠ, ನಿಂಗಣ್ಣ ಕುಂಟಿ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು.