ವಿದ್ಯಾಸಿರಿ ನಿಲ್ಲಿಸಿದ್ದು ಅನ್ಯಾಯ

Shashikla Jole
Published on

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2-3 ತಿಂಗಳಲ್ಲಿಯೇ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರಿಗೆ ಪೂರಕವಾಗಿದ್ದ 19ಕ್ಕೂ ಅಧಿಕ ಯೋಜನೆಗಳನ್ನು ತಡೆಹಿಡಿದಿದ್ದು ಖಂಡನೀಯ. ಆ ಯೋಜನೆಗಳನ್ನು ಮರುಜಾರಿ ಮಾಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 11 ಲಕ್ಷ ರೈತ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿದ್ದರು. ಅದನ್ನೂ ಸ್ಥಗಿತಗೊಳಿಸಲಾಗಿದೆ. ಎಪಿಎಂಸಿ ಕಾನೂನು ರೈತರಿಗೆ ಬೇಕಾದ ಕಡೆಗಳಲ್ಲಿ ತಾವು ಬೆಳೆದ ಬೆಳೆ, ತರಕಾರಿ ಮಾರುವ ಅನುಕೂಲ ಮಾಡಿಕೊಡಲಾಗಿತ್ತು. ಈ ಕಾಯ್ದೆಯನ್ನೂ ರದ್ದು ಮಾಡಿದ್ದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ದೂರಿದರು.

ಶ್ರಮ ಶಕ್ತಿ ಯೋಜನೆ ಚಿಕ್ಕ ಯೋಜನೆಯಾದರೂ ರೈತ ಕುಟುಂಬ ಇರುವ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ 500 ರೂ. ಪ್ರೋತ್ಸಾಹ ಧನ ನೀಡುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಯನ್ನೂ ತಡೆ ಹಿಡಿದಿದೆ. ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಯೋಜನೆ, ಮೀನುಗಾರಿಕೆ, ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ಲಸ್ಟರ್ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದವರು ಆ ಎಲ್ಲ ಯೋಜನೆಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 3 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಹಣ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರದಿಂದ ನೀಡಬೇಕಾಗಿದ್ದ ಹಣವನ್ನು ಸ್ಥಗಿತಗೊಳಿಸಿದ್ದಾರೆ. ಅವುಗಳನ್ನು ಮರುಜಾರಿ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಅನುದಾನವನ್ನು ಬೊಮ್ಮಾಯಿ ನೀಡಿದ್ದರು. ಈ ಸರ್ಕಾರ ನೀರಾವರಿ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೊಡುವುದಿಲ್ಲ ಎಂದು ಹೇಳಿದೆ. ಇದು ಉತ್ತರ ಕರ್ನಾಟಕದ ಜನ ವಿರೋಧಿ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ನಗರ ಘಟಕದ ಅಧ್ಯಕ್ಷ ಅನಿಲ ಬೆನಕೆ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ನೇರಲಿ, ಶಾಸಕರಾದ ಅಭಯ ಪಾಟೀಲ, ನಿಖಿಲ್ ಕತ್ತಿ, ಉಜ್ವಲಾ ಬಡವನಾಚೆ ಹಾಗೂ ಬಿಜೆಪಿ ಇತರ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

ದೆಹಲಿಗೆ ಹೋದಾಗ ಯಾರ ವಿರುದ್ಧವೂ ದೂರು ನೀಡಿಲ್ಲ

ಅಭಿವೃದ್ಧಿ ವಿಚಾರಕ್ಕಾಗಿ ನಾವು ದೆಹಲಿಗೆ ಹೋಗಿದ್ದೆವು. ಆದರೆ, ಯಾರ ವಿರುದ್ಧವೂ ದೂರು ನೀಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಬಹಳ ಇವೆ. ಆದರೆ, ಗೆಲುವಿಗೆ ಕಾರಣ ಇರುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದರೆ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಬೇರೆ ಅಭ್ಯರ್ಥಿ ಸ್ಪರ್ಧಿಸಿದರೂ ಅವರ ಗೆಲುವಿಗೂ ಶ್ರಮಿಸುತ್ತೇನೆ ಎಂದು ಮಹಾಂತೇಶ ಕವಟಗಿಮಠ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net