

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಆರಂಭಿಸಿರುವ ಮಿಷನ್ ವಿದ್ಯಾಕಾಶಿಯಿಂದ ಶೈಕ್ಷಣಿಕ ಸುಧಾರಣೆಯಲ್ಲಿ ಯಶಸ್ಸು ಕಂಡರೂ ಎಸ್‌ಎಸ್‌ಎಲ್‌ಸಿ ಫಲಿತಾಂಶದ ರ‍್ಯಾಂಕಿ0ಗ್‌ದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಪ್ರಸಕ್ತ ವರ್ಷವೂ ಧಾರವಾಡ ಐಐಐಟಿ ಸಹಯೋಗದಲ್ಲಿ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸ್ಮಾರ್ಟ್ ಬೋರ್ಡ್ಗಳಿಂದ ನೇರ ಪಾಠಗಳನ್ನು ಕಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ ಐಐಐಟಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮಿಷನ್ ವಿದ್ಯಾಕಾಶಿ ಯೋಜನೆಯಡಿ `ವಿದ್ಯಾಶಕ್ತಿ ಕಾರ್ಯಕ್ರಮ'ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಸ್ಮಾರ್ಟ್ ಬೋರ್ಡ್ ಹೊಂದಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಧಾರವಾಡ ಐಐಐಟಿ ಸಹಯೋಗದಲ್ಲಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನೆಯನ್ನು ಆನ್‌ಲೈನ್ ತರಗತಿಗಳ ಮೂಲಕ ಉಚಿತವಾಗಿ ಬೋಽಸಲಾಗುತ್ತಿದೆ. ವಿದ್ಯಾರ್ಥಿಗಳ ಸಂವಹನಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಜಿಲ್ಲೆಯ 106 ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 50ಕ್ಕಿಂತ ಕಡಿಮೆಯಾಗಿದೆ. 6 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಫಲಿತಾಂಶ ಕುಸಿತದ ವಿವರ ಸಂಗ್ರಹಿಸಿ ವಿಶ್ಲೇಷಿಸಲಾಗುತ್ತಿದೆ. ಲೋಪ ಕಂಡು ಬಂದರೆ ನಿಯಮಾನುಸಾರ ಸಂಬ0ಽಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಜಿ.ಪ0. ಸಿಇಒ ಭುವನೇಶ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಿ ವೇಳಾಪಟ್ಟಿ ಅನುಸಾರ ವರ್ಗಗಳನ್ನು ತೆಗೆದುಕೊಳ್ಳಬೇಕು. ಉದಾಸೀನತೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಐಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹಾದೇವ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಸುಬ್ರಮಣ್ಯ ಎಸ್., ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಿವೈಪಿಸಿ ಎಸ್.ಎಂ. ಹುಡೇದಮನಿ ಯೋಜನೆ ಕುರಿತು ಮಾತನಾಡಿದರು. ಕುಲಸಚಿವ ಡಾ. ಮೂರುಗನಾಥಂ ಪೊನ್ನುಸಾಮಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ ಎನ್.ಎಸ್. ನಿರೂಪಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಜಯಶ್ರೀ ಕಾರೆಕರ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಕ್ಷೇತ್ರ ಶಿಕ್ಷಣಾಽಕಾರಿಗಳು, ಇತರರಿದ್ದರು.