

ವಿಜಯವಾಣಿ ಸುದ್ದಿಜಾಲ ಉಡುಪಿ
ಸಕಲ ಜೀವಿಗಳಿಗೂ ನೇತ್ರವೇ ಪ್ರಧಾನ ಅಂಗ. ದೇಹದ ಯಾವುದೇ ಅಂಗ ಊನವಾಗಿದ್ದರೂ ಜೀವಿಸಲು ತೊಂದರಯಾಗದು. ಆದರೆ, ಅಂಧತ್ವವಿದ್ದರೆ ಬೆಳಕಿಲ್ಲ. ಬೆಳಕಿಲ್ಲವೆಂದರೆ ಜೀವನವೇ ಅಂಧಕಾರ. ಹಾಗಾಗಿ ಕಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಮ್ಮೆಲ್ಲರ ಜೀವನ ನಡೆಯುವುದು ಅಥವಾ ನಮ್ಮ ಜೀವನ ಮುನ್ನಡೆಸುವುದು ನೇತ್ರಗಳೇ ಆಗಿವೆ. ಹೀಗಾಗಿ ಅವುಗಳ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಅಗತ್ಯ ಎಂದು ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ನುಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ದೈಹಿಕ ಆರೋಗ್ಯದೊಂದಿಗೆ ಸಾಮಾಜಿಕ ಆರೋಗ್ಯವೂ ಮುಖ್ಯ. ಆರೋಗ್ಯದಾಯಕ ಸಮಾಜ ನಿರ್ಮಿಸುವಲ್ಲಿ ಇಂತಹ ಸಂಘ-ಸಂಸ್ಥೆಗಳ ಪಾತ್ರ ಅನನ್ಯ. ಎಲ್ಲವನ್ನೂ ಸರ್ಕಾರದಿಂದಲೇ ನಿರ್ವಹಿಸುವುದು ಅಸಾಧ್ಯ ಎಂದರು.
ರಾವೇಂದ್ರ ಮುಚ್ಚಿಂತಾಯ, ರಾಮಕೃಷ್ಣ ಕಾರಂತ ಪ್ರಾರ್ಥಿಸಿದರು. ಕೃಷ್ಣ ಸೇವಾ ಬಳಗದ ಸಂಚಾಲಕ ವಿಷ್ಣುಪ್ರಸಾದ ಪಾಡಿಗಾರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಗೆ ವರೆಗೆ ನಡೆದ ನೇತ್ರ ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. 50ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಪ್ರಸಾದ ನೇತ್ರಾಲಯದ ವೈದ್ಯ ನಾಡೋಜ ಡಾ.ಕೃಷ್ಣ ಪ್ರಸಾದ ಅವರು ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆ ಮಾಡಿಕೊಡಲಿದ್ದಾರೆ ಎಂದು ಆಸ್ಪತ್ರೆಯ ಮೆನೇಜರ್ ಮಧ್ವವಲ್ಲಭ ಆಚಾರ್ಯ ತಿಳಿಸಿದರು.
ಉಡುಪಿ ಜಿಲ್ಲಾ ರಕ್ತನಿಧಿಯ ವೈದ್ಯಾಧಿಕಾರಿ ಡಾ. ವೀಣಾಕುಮಾರಿ ರಕ್ತದಾನ ಮಹತ್ವ ಕುರಿತು ಸಮಗ್ರ ಮಾಹಿತಿ ನೀಡಿದರು. ಅರಿವಿನೊಂದಿಗೆ ಸ್ವಯಂ ಪ್ರೇರಣೆಯ ರಕ್ತದಾನಕ್ಕೆ ಹೆಚ್ಚಿನ ಮಹತ್ವವಿದೆ. ಒಬ್ಬರ ದೇಹದಿಂದ ತೆಗೆಯುವ ಕೇವಲ 350 ಎಂಎಲ್ ರಕ್ತವು ಮೂವರಿಗೆ ಜೀವದಾನ ನೀಡುತ್ತದೆ. ಒಬ್ಬರಿಂದ ತೆಗೆದ ರಕ್ತದಿಂದ ಪ್ಲೇಟ್ಲೆಟ್ಸ್, ಕೆಂಪು ರಕ್ತಕಣ ಹಾಗೂ ಪ್ಲಾಸ್ಮಾವನ್ನು ಬಳಸಿಕೊಳ್ಳಬಹುದಾಗಿದೆ. ರಕ್ತಕ್ಕೆ ಯಾವುದೇ ಜಾತಿ-ಮತವಿಲ್ಲ. ಅದು ಯಾವ ಧಮೀರ್ಯನ ರಕ್ತ ಎಂದು ಪಡೆಯುವವರಿಗೂ ತಿಳಿಯುವುದಿಲ್ಲ. ಆ ರಕ್ತಕ್ಕೆ ಯಾವ ಗ್ರೂಪ್ ಎಂಬ ಜಾತಿ ಮಾತ್ರ ಇರುತ್ತದೆ. ಅನ್ಯರ ಜೀವ ಉಳಿಸುವುದೊಂದೇ ರಕ್ತದ ಕಾರ್ಯ ಎಂದರು.
ಕಣ್ಣುಗಳಿಗೆ ದೋಷ ಬಂದಾಗ ಆಸ್ಪತ್ರೆಗೆ ತಪಾಸಣೆಗೆ ಆಗಮಿಸುವ ಬದಲು ನೇತ್ರಗಳ ರಕ್ಷಣಾರ್ಥವಾಗಿ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಿಂದ ಸಂಭವನೀಯ ಅಂಧತ್ವದಿಂದ ಪಾರಾಗಬಹುದು. ಮರಣದ ನಂತರ ನೇತ್ರದಾನದಿಂದಲೂ ಸಹ ಅನೇಕ ಅಂಧರ ಬಾಳಿಗೆ ಬೆಳಕು ನೀಡಬಹುದು. | ಡಾ. ಶರತ್ ಎಸ್. ಹೆಗ್ಡೆ. ರೆಟಿನಾ ತಜ್ಞ.