

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಮುಖೇನ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಜ್ಞಾನ ವೃದ್ಧಿಸಿಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂದು ಕಂಬಾಳು ಮೇಲಣಗವಿ ಮಠದ ಡಾ.ಶ್ರೀ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಂಪುರ ಹೋಬಳಿಯ ಕಂಬಾಳು ಶ್ರೀ ವಿಶ್ವರಾಧ್ಯ ದೇಶಿಕೇಂದ್ರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿವಗಂಗೆ ಗ್ರಾಪಂನಿಂದ ವಿದ್ಯಾರ್ಥಿಗಳಿಗೆ ಬುಧವಾರ ವಿಜಯವಾಣಿ ವಿದ್ಯಾರ್ಥಿ ಉದ್ಯೋರ್ಥಿ ಮಿತ್ರ ವಿತರಿಸಿ ಮಾತನಾಡಿದರು. ಉದ್ಯೋಗ ಮಿತ್ರ ಸಂಚಿಕೆಯನ್ನು ವರ್ಷಂಪೂರ್ತಿ ದಾಖಲೆ ಮಾಡಿಟ್ಟುಕೊಂಡರೆ ವಿದ್ಯಾರ್ಥಿ ಜೀವನಕ್ಕೆ ಉಪಯೋಗವಾಗುತ್ತದೆ. ವಿಜ್ಞಾನ, ಗಣಿತ ಮತ್ತು ಆಂಗ್ಲಭಾಷೆ ವಿಷಯಗಳ ಸಮಗ್ರ ನೋಟ ಮಿತ್ರದಲ್ಲಿದ್ದು, ಸಮರ್ಪಕವಾಗಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಲು ಅನೂಕುಲವಾಗುತ್ತದೆ ಎಂದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ದಿನಪತ್ರಿಕೆ ವಿತರಿಸುವ ಕೆಲಸ ಮಾಡುತ್ತಿದ್ದರೂ ಜತೆಜತೆಗೆ ಓದಿಗೂ ಆದ್ಯತೆ ನೀಡಿ ಪತ್ರಿಕೆಯಲ್ಲೇ ದೊಡ್ಡ ಸುದ್ದಿಯಾದರು ಎಂದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ಬರೆಯುವುದನ್ನು ಕಲಿತರೆ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಪಾಲಕರಿಗೆ, ಶಾಲೆಗೆ ಒಳ್ಳೆಯ ಹೆಸರು ತರಬಹುದು ಎಂದರು.
ಗ್ರಾಪಂ ಸದಸ್ಯ ಪ್ರಭುದೇವ ಮಾತನಾಡಿ, ವಿದ್ಯಾರ್ಥಿಗಳು ಸಮಯಕ್ಕೆ ಪ್ರಾಮುಖ್ಯತೆ ನೀಡಬೇಕು. ಸಮಯ ವ್ಯರ್ಥವಾದರೆ ಮರಳಿ ಸಿಗುವುದಿಲ್ಲ. ಆದ್ದರಿಂದ ಪಠ್ಯದ ಜತೆಗೆ ವಿದ್ಯಾರ್ಥಿ ಮಿತ್ರದಲ್ಲಿರುವ ಒಂದೊಂದು ಅಂಶವನ್ನು ಸಮಗ್ರವಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಬೇಕು ಎಂದರು.
ಗ್ರಾಪಂ ಸದಸ್ಯೆ ಉಷಾ ಮಂಜುನಾಥ, ಶಾಲೆ ನಿರ್ದೇಶಕ ಕೆ.ಸಿ.ಅಣ್ಣಪ್ಪ, ಮುಖಂಡರಾದ ಹೊಸಹಳ್ಳಿ ಬಾಬು, ಮಹೇಶ, ಮುಪ್ಪಿನಸ್ವಾಮಿ, ಪ್ರೌಢಶಾಲೆ ಮುಖ್ಯಶಿಕ್ಷಕ ವಿಜಯಕುಮಾರ್, ಶಿಕ್ಷಕರಾದ ಬಿ.ವಿಶ್ವಾನಾಥ, ಎಚ್.ಎಂ.ವಿರೇಶ್, ಸಿ.ಜ್ಞಾನಮೂರ್ತಿ, ರವಿಕಿರಣ, ಯೋಗಿಶ್ವರಮ್ಮಇದ್ದರು.