

ವಿಜಯವಾಣಿ ಸುದ್ದಿಜಾಲ ದಾಬಸ್ ಪೇಟೆ
ಸೂಕ್ಷ್ಮವಾಗಿ ಯಾವುದೇ ವಿಷಯ ಅರ್ಥಮಾಡಿಕೊಂಡರೆ ಬದುಕಿನಲ್ಲಿ ಸಾಧನೆಗೆ ಹೆಚ್ಚಿನ ಬಲ ಸಿಗುತ್ತದೆ ಎಂದು ಸೋಂಪುರ ಗ್ರಾಪಂ ಅಧ್ಯಕ್ಷ ಆರ್.ಶಿವಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತ ಹಿರಿಯ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು.ಉತ್ತಮ ಜ್ಞಾನ ಸಂಪಾದನೆಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಉದ್ಯೋಗ ಪೂರಕವಾಗಿದ್ದು, ಪ್ರತಿ ವಿದ್ಯಾರ್ಥಿಯೂ ತಪ್ಪದೆ ಸಂಚಿಕೆ ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ದಿನಗಳಲ್ಲಿ ದಿನಪತ್ರಿಕೆ ಓದುವುದರಿಂದ ಯಾವುದೇ ವಿಷಯವನ್ನಾದರೂ ತಿಳಿಯಬಹುದು. ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಮುಂದಿನ ದಿನಗಳಲ್ಲಿ ಎದುರಿಸುವ ಎಲ್ಲ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆ ಸುಲಭವಾಗಲಿವೆ ಎಂದರು.
ಪಿಡಿಒ ಎ.ಎಂ.ರವಿಶಂಕರ್ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಭ್ಯಾಸಕ್ಕೆ ಆದ್ಯತೆ ನೀಡಬೇಕು. ಬಡವನಾದರೂ, ಸಾಹುಕಾರನಾದರೂ ಸರ್ಕಾರದಿಂದ ದೊರೆಯುವುದು ಒಂದೇ ಮಾದರಿಯ ಶಿಕ್ಷಣವಾಗಿದ್ದು, ಎಲ್ಲರೂ ಗುಣಮಟ್ಟದ ಶಿಕ್ಷಣ ಪಡೆದು ಹೆಚ್ಚಿನದ್ದನ್ನು ಸಾಧಿಸಬೇಕು ಎಂದರು. ಹಣ, ಆಸ್ತಿ ಹಾಗೂ ಇನ್ನಿತರ ವಸ್ತುಗಳನ್ನು ಕಳೆದುಕೊಳ್ಳಬಹುದು. ಆದರೆ ಕಠಿಣ ಪರಿಶ್ರಮದಿಂದ ಪಡೆದ ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾಹಂತದಿಂದಲೇ ಪರಿಶ್ರಮದಿಂದ ಅಭ್ಯಾಸ ಮಾಡುವ ಗುಣ ಬೆಳೆಸಿಕೊಂಡರೆ ಮುಂದೆ ಉತ್ತಮ ಲ ಲಭಿಸಲಿದೆ ಎಂದರು.
ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಸಕಲ ಜ್ಞಾನ ಭಂಡಾರವೇ ಅಡಗಿದ್ದು, ಪಠ್ಯ ವಿಷಯಗಳ ಜತೆಗೆ ಸಂವಿಧಾನದ ಅರಿವು, ಪ್ರಚಲಿತ ವಿದ್ಯಾಮಾನದ ಕುರಿತು ಬೆಳಕು ಚಲ್ಲುತ್ತಿದ್ದು, ಸಂಚಿಕೆಯನ್ನು ನಿತ್ಯ ಓದುವ ವೇಳೆ ಟಿಪ್ಪಣಿ ಮಾಡಿಕೊಂಡರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜಯಸಾಧಿಸಬಹುದು ಎಂದರು.
ಮುಖ್ಯಶಿಕ್ಷಕ ಟಿ.ಗಂಗರಾಜು ಮಾತನಾಡಿ, ವಿದ್ಯಾರ್ಥಿ ಮಿತ್ರ ನಿಜವಾಗಿಯೂ ಪ್ರತಿ ವಿದ್ಯಾರ್ಥಿಯ ಜ್ಞಾನ ಭಂಡಾರ ಹೆಚ್ಚಿಸುವ ಕಾಮಧೇನಾಗಿದೆ. ಸಂಚಿಕೆಯಲ್ಲಿ ಪ್ರಕಟವಾಗುವ ವಿಷಯ ಸಾಮಾನ್ಯ ಜ್ಞಾನ ಹೆಚ್ಚಿಸುವ ಜತೆಗೆ ಇಂಗ್ಲಿಷ್ ಕಲಿಕೆಗೂ ಪೂರಕವಾಗಿದೆ. ವಿದ್ಯಾರ್ಥಿಗಳೇ ಬರೆಯುವ ಚಿತ್ರಗಳು ಉತ್ತಮವಾಗಿ ಮೂಡಿಬರುತ್ತಿವೆ. ಇದರಿಂದ ವಿದ್ಯಾರ್ಥಿಗಳಲ್ಲಿರುವ ಕಲೆಗೂ ಪ್ರೋತ್ಸಾಹ ನೀಡುತ್ತಿರುವ ಪತ್ರಿಕೆ ಕಾರ್ಯ ಪ್ರಶಂಶನೀಯ ಎಂದರು.
ಪತ್ರಿಕೆ ವಿತರಕ ಬಾಬು, ಶಿಕ್ಷಕರಾದ ಎಂ.ಚಿಕ್ಕಣ್ಣ, ಬಿ.ಆರ್.ಮಂಜುಳಾ, ಜಿ.ಸೌಭಾಗ್ಯಮ್ಮ ರಂಗಮೂರ್ತಿ, ಎನ್.ಕೆ.ದೇವಿಕಾ, ಷಣ್ಮುಖಾಚಾರಿ, ವಿ.ಎಚ್.ಮಮತಾ, ಎಂ.ವಿ.ನಂದಿಶ್, ಟಿ.ಎಚ್.ರೂಪಾದೇವಿ, ಸುಜಾತಾ ಬಿರಾದಾರ, ಸಿ.ನಾಗರತ್ನ, ಕಾಂತಮ್ಮ, ಶ್ವೇತಾ ಇತರರು ಇದ್ದರು.