

ಮೈಸೂರು: ದೇಶದ ಕಾನೂನು ಅರಿತು ಕಾನೂನನ್ನು ಗೌರವಿಸಿದಾಗ ಮಾತ್ರ ಉತ್ತಮ ನಾಗರಿಕರಾಗುತ್ತೇವೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ಬೋಗಾದಿಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಕ್ಕುಗಳು ಮತ್ತು ಕರ್ತವ್ಯ ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಕೇಳುವುದಕ್ಕಿಂತ ಮೊದಲು ನಾವು ನಮ್ಮ ಕರ್ತವ್ಯಗಳ ಬಗ್ಗೆ ಗಮನಹರಿಸ ಬೇಕು. ದೇಶ ಸೇವೆಗೆ ಪ್ರತಿಯೊಬ್ಬರೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿ ಎಲ್ಲರನ್ನೂ ಅಪ್ಪಿಕೊಂಡ ಸಾಹಿತ್ಯವೇ ವಚನ ಸಾಹಿತ್ಯ. ಪ್ರಾಜ್ಞರು ಮಾತ್ರ ರಚಿಸಿ ಅರ್ಥಮಾಡಿಕೊಳ್ಳುತ್ತಿದ್ದ ಹಳಗನ್ನಡ ಸಾಹಿತ್ಯಕ್ಕೆ ತಿಲಾಂಜಲಿ ಹೇಳಿ ಜನಸಾಮಾನ್ಯರು ಸಹ ಸಾಹಿತ್ಯವನ್ನು ರಚಿಸಬಹುದು ಎಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ವಚನಯುಗದಿಂದ ತಳಮಟ್ಟದವರೂ ಕೂಡ ಸಾಕ್ಷರರಾಗಲು ಸಾಧ್ಯವಾಯಿತು ಎಂದರು.
ವಚನ ವಾಚನ ಮತ್ತು ವಿಶ್ಲೇಷಣೆ ಮಾಡಿದ 30 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸನಾಪತ್ರ ಮತ್ತು ವಚನಪುಸ್ತಕ ನೀಡಲಾ ಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ವಕೀಲ ರವಿಕುಮಾರ್, ನಿಲಯ ಪಾಲಕಿ ಚಂದ್ರಮ್ಮ ಇದ್ದರು.