ಹೊಸ ವರ್ಷದ ಸಂಭ್ರಮಾಚರಣೆಗೆ ಇಬ್ಬರು ಬಲಿ

30 smg 5
Published on

ಶಿವಮೊಗ್ಗ: ವಿದ್ಯಾನಗರದಲ್ಲಿ ಶನಿವಾರ ತಡರಾತ್ರಿ ಹೊಸ ವರ್ಷಾಚರಣೆ ವೇಳೆ ಮಿಸ್‌ಫೈರ್ ಆಗಿ ಗುಂಡು ಯುವಕನನ್ನು ಬಲಿ ಪಡೆದಿದೆ. ಮತ್ತೊಂದೆಡೆ ಗುಂಡು ಹಾರಿಸಿದ ವ್ಯಕ್ತಿ ಹೃದಯಾಘಾತದಿಂದ ಕುಸಿದುಬಿದ್ದು ಅಸುನೀಗಿದ್ದು ಪಾರ್ಟಿ ಮಾಡಿ ಸಂಭ್ರದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.

ನಗರದ ಬಾಲರಾಜ ಅರಸ್ ರಸ್ತೆಯ ಪಿಡಬ್ಲುೃಡಿ ಕ್ವಾರ್ಟರ್ಸ್ ನಿವಾಸಿ ವಿನಯ್(34) ಗುಂಡು ತಗುಲಿ ಮೃತಪಟ್ಟರೆ, ಗುಂಡು ಹಾರಿಸಿದ ಗೋಪಾಲ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ ಓಲೇಕಾರ್(67) ಹೃದಯಾಘಾತದಿಂದ ಅಸುನೀಗಿದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ಮಂಜುನಾಥ ಓಲೇಕಾರ್ ಮನೆಯಲ್ಲಿ ಶನಿವಾರ ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಮಂಜುನಾಥ ಅವರ ಪುತ್ರ ಸಂದೀಪ್ ಮತ್ತು ವಿನಯ್ ಸ್ನೇಹಿತರಾಗಿದ್ದು ವಿನಯ್ ಪಾರ್ಟಿಗೆ ಬಂದಿದ್ದ. ಎಲ್ಲರೂ ಸೇರಿ ಪಾರ್ಟಿ ಮಾಡಿದ್ದರು. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಮಂಜುನಾಥ್ ಮನೆಯೊಳಗಿದ್ದ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಬಂದು ಗಾಳಿಯಲ್ಲಿ ಗುಂಡು ಹಾರಿಸುವಾಗ ಅಚಾತುರ್ಯದಿಂದ ಗುಂಡು ಎದುರಿಗಿದ್ದ ವಿನಯ್ ಹೊಟ್ಟೆ ಸೀಳಿತು. ತಕ್ಷಣ ವಿನಯ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವಘಡ ಸಂಭವಿಸಿದ ಬೆನ್ನಲ್ಲೇ ಘಾಸಿಗೆ ಒಳಗಾದ ಬಂದೂಕಿನ ಮಾಲೀಕ ಮಂಜುನಾಥ ಓಲೇಕಾರ್ ಕುಸಿದುಬಿದ್ದು ಸ್ಥಳದಲ್ಲೇ ಅಸುನೀಗಿದರು. ವಿನಯ್ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net