Web Exclusive | ವಿದ್ಯಾಗಮ ಸ್ಥಗಿತ; ಮಕ್ಕಳು ಕಲಿಕೆ ಬದಲು ಕೂಲಿಯತ್ತ ಚಿತ್ತ

Vidyagama collage
Published on

| ಜಯತೀರ್ಥ ಪಾಟೀಲ ಕಲಬುರಗಿ

ಪ್ರತಿ ಮಗುವಿನ ಭವಿಷ್ಯದ ಕನಸಿಗೆ ನೈಸರ್ಗಿಕ ವಿಕೋಪ, ಮಹಾಮಾರಿ ಸೇರಿ ಇನ್ನಾವುದು ಅಡ್ಡಿಯಾಗದಂತೆ ನನಸಾಗಿಸುವ ದೂರದೃಷ್ಟಿಯೊಂದಿಗೆ ರಾಜ್ಯದಲ್ಲಿ ಆರಂಭಿಸಿದ್ದ ವಿದ್ಯಾಗಮ ಯೋಜನೆ ಸ್ಥಗಿತಗೊಂಡಿದೆ. ಹೀಗಾಗಿ ಕಲ್ಯಾಣ ಕರ್ನಾಟಕದಲ್ಲಿ ವಠಾರ ಶಾಲೆಗೆ ಹೋಗುತ್ತಿದ್ದ ಮಕ್ಕಳು ಕೂಲಿ-ನಾಲಿ ಮಾಡುತ್ತಿದ್ದು, ಸರ್ಕಾರದ ವಿದ್ಯಾಗಮ ಬಂದ್ ನಿರ್ಧಾರ ಬಡ ಮಕ್ಕಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಶಾಲೆ ಮುಚ್ಚಿರುವ ಸಂದರ್ಭದಲ್ಲೂ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರಿಸಲು ವಿದ್ಯಾಗಮ ಆರಂಭವಾಗಿತ್ತು. ಕಲಬುರಗಿ ಜಿಲ್ಲೆಯಿಂದಲೇ ಈ ಯೋಜನೆ ಶುರುವಾಗಿ ರಾಜ್ಯ, ರಾಷ್ಟ್ರವ್ಯಾಪಿ ವಿಸ್ತರಿಸಿಕೊಂಡಿದ್ದು ಇತಿಹಾಸ. ಆದರೆ ಕೋವಿಡ್ ನೆಪದಲ್ಲಿ ಇಡೀ ಯೋಜನೆ ಸ್ಥಗಿತಗೊಳಿಸುವ ಮೂಲಕ ಸರ್ಕಾರ ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಕಲಿಕೆಯನ್ನೇ ಕಸಿದುಕೊಂಡಿದೆ.

ಸರ್ಕಾರಿ ಶಾಲಾ ಮಕ್ಕಳಿಗಾಗಿ ಈ ಯೋಜನೆ ಆರಂಭವಾಗಿದ್ದರೂ ವಠಾರ ಶಾಲೆಯಲ್ಲಿ ಖಾಸಗಿ ಶಾಲಾ ಮಕ್ಕಳಿಗೂ ಅವಕಾಶ ನೀಡಲಾಗಿತ್ತು. 9-10ನೇ ತರಗತಿ ಆನ್​ಲೈನ್ ಮಾಡಿದರೆ, 1-8ನೇ ತರಗತಿ ಮಕ್ಕಳಿಗೆ ವಿದ್ಯಾಗಮದ ಮೂಲಕ ಪಾಠ ಮಾಡಲಾಗುತ್ತಿತ್ತು. ಕೋವಿಡ್ ಜಾಗೃತಿ, ಸಂವಿಧಾನ ಪೀಠಿಕೆ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಪ್ರಜಾಪ್ರಭುತ್ವದ ಕಲ್ಪನೆ ಕಟ್ಟಿಕೊಡಲಾಗುತ್ತಿತ್ತು. ಯೋಜನೆ ಅಡಿ ಓದು, ಬರಹ ಮತ್ತು ಲೆಕ್ಕ ಹೇಳಿಕೊಡಲಾಗುತ್ತಿತ್ತು. ಇನ್ನೊಂದು ಅಚ್ಚರಿ ಸಂಗತಿ ಎಂದರೆ ಈ ಯೋಜನೆ ಅನುಷ್ಠಾನದಿಂದಾಗಿ ಖಾಸಗಿ ಶಾಲಾ ಮಕ್ಕಳು ಸಹ ಸರ್ಕಾರಿ ಶಾಲೆಗಳತ್ತ ಹೆಜ್ಜೆ ಹಾಕಲಾರಂಭಿಸಿದರು. ಗ್ರಾಮೀಣ ಭಾಗದಲ್ಲಿ ರೆಗ್ಯೂಲರ್ ಕ್ಲಾಸ್​ಗಿಂತ ವಠಾರ ಶಾಲೆ ದಾಖಲಾತಿ ಹೆಚ್ಚಾಗಿತ್ತು. ಸಮ್ಮಿಳಿತ ಬೋಧನಾ ತಂತ್ರ (ಇಂಟಿಗ್ರೇಟೆಡ್ ಅಪ್ರೋಚ್) ಮೂಲಕ ಶಿಕ್ಷಕರು ಪಾಠ ಮಾಡುತ್ತಿದ್ದರು.

ಕಲಬುರಗಿ ಜಿಲ್ಲೆಯ ವಠಾರ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿರುವ ಶಿಕ್ಷಕರು.

ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಬಂದ್ ಆದಾಗ ಶುರುವಾದ ವಿದ್ಯಾಗಮ ಯೋಜನೆ ಯಶಸ್ವಿಯಾಗಿ ನಡೆದಿತ್ತು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ವಠಾರ ಶಾಲೆಗೆ ಬಂದು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಯೋಜನೆ ಬಂದ್ ಆದ ನಂತರ ಪರ್ಯಾಯ ಮಾರ್ಗ ಕಾಣದೆ ಕೂಲಿ ಕೆಲಸಕ್ಕೆ ಹೋಗುತ್ತಿವೆ. ಹತ್ತಿ ಬಿಡಿಸುವುದು, ಮೆಣಸಿನಕಾಯಿ ಹರಿಯುವುದು, ಕಟ್ಟಡ ಕೆಲಸ ಹೀಗೆ ನಾನಾ ಕೆಲಸಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಕೆಲವು ಹಾಳ-ಹರಟೆಗೆ ಬಿದ್ದಿದ್ದು, ವಠಾರ ಶಾಲೆಯಲ್ಲಿ ಕಲಿತಿದ್ದ ಅಲ್ಪಸ್ವಲ್ಪನ್ನೂ ಮರೆತುಬಿಟ್ಟಿವೆ.

ರಾಜ್ಯದಲ್ಲಿ ಈಗ ಕೋವಿಡ್ ಸೋಂಕು ಕೊಂಚ ಮಟ್ಟಿಗೆ ನಿಯಂತ್ರಣದಲ್ಲಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ. ಪಾಲಕರು, ಶಿಕ್ಷಕರು ಉತ್ಸುಕರಾಗಿದ್ದಾರೆ. ನಿತ್ಯ ಬದಲಿಗೆ ದಿನಬಿಟ್ಟು ದಿನ ತರಗತಿ ನಡೆಸುವುದೂ ಸೇರಿ ಕೆಲ ಮಾರ್ಪಾಡುಗಳೊಂದಿಗೆ ವಿದ್ಯಾಗಮ ಪುನರಾರಂಭಿಸಲು ಸರ್ಕಾರ ಪರಿಶೀಲನೆ ನಡೆಸಬೇಕಿದೆ.

ಏನಿದು ವಿದ್ಯಾಗಮ?

ಪ್ರತಿ ಮಗು ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಕಾರ್ಯಯೋಜನೆ ರೂಪಿಸುವುದು, ಕೋವಿಡ್ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆ ಆರಂಭವಾಗುವವರೆಗೆ ಶಿಕ್ಷಕರು ಮಕ್ಕಳೊಂದಿಗೆ ಸಂಪರ್ಕದಲ್ಲಿ ಇರುವುದು, ಬಾಲ ಕಾರ್ವಿುಕ, ಬಾಲ್ಯ ವಿವಾಹದಂಥ ಸಾಮಾಜಿಕ ಪಿಡುಗುಗಳಿಗೆ ಮಕ್ಕಳು ಒಳಗಾಗುವುದನ್ನು ತಡೆಗಟ್ಟುವುದು, ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸುವುದು, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿಪಡಿಸುವುದು, ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಅಗತ್ಯತೆ ಪೂರೈಸಲು ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆ ಸಾಮಗ್ರಿಯನ್ನು ಮಕ್ಕಳ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ವಿದ್ಯಾಗಮನ ಆರಂಭಿಸಲಾಗಿತ್ತು.

ವಠಾರ ಶಾಲಾ ನಿರ್ವಹಣೆ

ಜಿಲ್ಲೆ- ವಠಾರಾ ಶಾಲೆಗಳು- ಮಕ್ಕಳ ದಾಖಲಾತಿ

ಬಳ್ಳಾರಿ- 8084- 244452

ಬೀದರ್- 6055- 151546

ಕಲಬುರಗಿ- 9089- 213157

ಕೊಪ್ಪಳ- 5149- 137960

ರಾಯಚೂರು- 9684- 222748

ಯಾದಗಿರಿ- 4645- 75874

ಹಳ್ಳಿ ಮಕ್ಕಳಿಗೆ ತುಂಬ ಚೆನ್ನಾಗಿತ್ತು ವಿದ್ಯಾಗಮ. ಆಸಕ್ತಿಯಿಂದ ವಠಾರ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಶಾಲೆಗಿಂತ ಹೆಚ್ಚು ಇಲ್ಲಿ ಆಸಕ್ತಿ ತೋರಿದ್ದರು. ಪಾಲಕರೂ ಸಹಕಾರ ನೀಡಿದ್ದರು. ಆದರೆ ಈ ಸ್ಕೀಂ ಬಂದ್ ಆಗಿದ್ದರಿಂದ ಪಾಲಕರು, ಶಿಕ್ಷಕರಿಗೆ ಬೇಜಾರಾಗಿದೆ. ಕೋವಿಡ್ ನಿಯಮಾವಳಿ ಅನುಸರಿಸಿ ಪಾಠ ಮಾಡಲಾಗುತ್ತಿತ್ತು. ಸರ್ಕಾರ ಮರುಪರಿಶೀಲನೆ ನಡೆಸುವುದು ಸೂಕ್ತ.

| ರೇಣುಕಾ ಮುಖ್ಯಗುರು, ಸಹಿಪ್ರಾ ಶಾಲೆ ನೀಲಹಳ್ಳಿ, ಕಮಲಾಪುರ

ವಠಾರ ಶಾಲೆಯೂ ಬಂದ್ ಆಗಿದ್ದರಿಂದ ಮಕ್ಕಳು ಬೇಕಾಬಿಟ್ಟಿ ತಿರುಗಾಡುತ್ತಿವೆ. ಎಷ್ಟೋ ಜನ ಬಡವರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ. ಓಕಳಿ ಗ್ರಾಮವೊಂದರಲ್ಲೇ 8 ಕೇಂದ್ರಗಳಲ್ಲಿ ವಠಾರ ಶಾಲೆ ಸಕ್ರಿಯವಾಗಿ ನಡೆಯುತ್ತಿದ್ದವು. ಮಕ್ಕಳು ಎರಡಕ್ಷರ ಕಲಿಯಲಿ ಎಂದು ಕೋವಿಡ್ ಭಯದಲ್ಲೂ ಕಳುಹಿಸುತ್ತಿದ್ದೆವು. ಬಂದ್ ಮಾಡಿದ್ದು ಸರಿಯಾದ ಕ್ರಮವಲ್ಲ.

| ಮಲ್ಲಿಕಾರ್ಜುನ ಶೇರಿ ಪಾಲಕರು, ಓಕಳಿ ಗ್ರಾಮ

ಸರ್ಕಾರ ವಠಾರ ಶಾಲೆ ಏಕೆ ಬಂದ್ ಮಾಡಿತೋ ಗೊತ್ತಿಲ್ಲ. ಮಾಸ್ಕ್ ಹಾಕುವುದು, ಸ್ಯಾನಿಟೈಸ್ ಮಾಡುವುದು ಸೇರಿ ಸರ್ಕಾರದ ನಿಯಮಾವಳಿಯಂತೆ ತರಗತಿಗಳು ನಡೆದವು. ಮನೆಯಲ್ಲಿ ಮಕ್ಕಳು ಖಾಲಿ ಕುಳಿತರೂ ಪುಸ್ತಕ ಓಪನ್ ಮಾಡ್ತಾ ಇಲ್ಲ. ಬಂದ್ ಮಾಡಿರುವ ಸರ್ಕಾರದ ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಮಾರಕ.

| ವೀರಣ್ಣ ಮಾಲಿಪಾಟೀಲ್ ಅಧ್ಯಕ್ಷ, ಎಸ್​ಡಿಎಂಸಿ ಓಕಳಿ

ಸರ್ಕಾರದ ಹಂತದಲ್ಲಿ ಈ ಯೋಜನೆ ಸಂಪೂರ್ಣ ಬಂದ್ ಆಗಿಲ್ಲ. ಕೋವಿಡ್ ಕಾರಣದಿಂದಾಗಿ ತಾತ್ಕಾಲಿಕ ಸ್ಥಗಿತಗೊಂಡಿದೆ. ಈಗ 8ನೇ ತರಗತಿವರೆಗೆ ಶಾಲೆ ಪ್ರಾರಂಭಿಸುತ್ತಿಲ್ಲ. ಹೀಗಾಗಿ ಪರ್ಯಾಯ ಯೋಚನೆ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಚರ್ಚಾ ಹಂತದಲ್ಲಿದ್ದು, ಶೀಘ್ರದಲ್ಲಿ ಮತ್ತೆ ಶುರು ಮಾಡಬಹುದು.

| ನಲಿನ್ ಅತುಲ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net