ನೀವೂ ವಿದ್ಯಾದಾನಿಗಳಾಗಬಹುದು…!

book
Published on
  • ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ನೀಡುವ ಕಾರ್ಯಕ್ರಮ
  • ಭಾರತೀಯ ಜೈನ್ ಸಂಘಟನೆಯಿಂದ ಸೇವಾ ಕಾರ್ಯ

ಸದೇಶ್ ಕಾರ್ಮಾಡ್ ಮೈಸೂರು
ಉನ್ನತ ಶಿಕ್ಷಣ ಪಡೆಯಬೇಕು ಎಂಬುದು ಪ್ರತಿಯೊಂದು ಯುವಜನರ ಕನಸು. ಆದರೆ, ಸಾಕಷ್ಟು ಯುವಜನರ ಈ ಕನಸನ್ನು ಬಡತನ ಕಸಿಯುತ್ತದೆ. ಆದರೆ, ಬಡ ವರ್ಗದ ಮಕ್ಕಳ ಉನ್ನತ ಶಿಕ್ಷಣ ಕನಸನ್ನು ನನಸಾಗಿಸಲು ಭಾರತೀಯ ಜೈನ್ ಸಂಘಟನೆ ಜಿಲ್ಲೆಯಲ್ಲಿ ಅಳಿಲು ಸೇವೆಗೆ ಮುಂದಾಗಿದೆ.

ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವ ಬಡ ವರ್ಗದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಖರೀದಿಸುವುದು ದೊಡ್ಡ ಸವಾಲಿನ ವಿಚಾರ. ಸಾಕಷ್ಟು ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕ ಪಡೆದು ಓದು ಮುಂದುವರೆಸುತ್ತಾರೆ. ಆದರೆ, ಇನ್ನುಳಿದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಖರೀದಿಯ ಸಮಸ್ಯೆ ಎದುರಾಗುತ್ತದೆ. ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಭಾರತೀಯ ಜೈನ್ ಸಂಘಟನೆ 2017ರಲ್ಲಿ ‘ನಿಮ್ಮಿಂದ ವಿದ್ಯಾದಾನ’ ಕಾರ್ಯಕ್ರಮ ಜಾರಿಗೊಳಿಸಿತು. ಇದರ ಲಾಭವನ್ನು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿವರ್ಷ ಪಡೆಯುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ದಾನವಾಗಿ ನೀಡಿದರೆ ಆ ಪಠ್ಯ ಪುಸ್ತಕವನ್ನು ಅರ್ಹ ಬಡ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯವನ್ನು ಭಾರತೀಯ ಜೈನ್ ಸಂಘಟನೆ ಮಾಡುತ್ತಿದೆ. ಪ್ರತಿ ವರ್ಷ ಸಂಸ್ಥೆಯು ನಾಲ್ಕೈದು ಸಾವಿರ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ ಬಡ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.

ದಾನ ಪ್ರಕ್ರಿಯೆ ನಡೆಯುವುದು ಹೇಗೆ?: ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಪೋಸ್ಟರ್‌ಗಳ ಮೂಲಕ ಭಾರತೀಯ ಜೈನ್ ಸಂಘಟನೆಯು ವಿದ್ಯಾದಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಪಠ್ಯ ಪುಸ್ತಕಗಳನ್ನು ಸಂಸ್ಥೆಗೆ ನೀಡುತ್ತಾರೆ. ಸಂಸ್ಥೆಯು ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ ದಿನಾಂಕ ನಿಗದಿ ಪಡಿಸಿ ನಗರದ ಯಾವುದಾದರೊಂದು ಭಾಗದಲ್ಲಿ ಪಠ್ಯ ಪುಸ್ತಕವನ್ನು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿಕೆ ಮಾಡುತ್ತದೆ.
ಪಠ್ಯ ಪುಸ್ತಕ ಪಡೆಯಲು ಬಯಸುವ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಕ್ಕೆ ಸಂಬಂಧಿಸಿದ ಅಂಕಪಟ್ಟಿ, ಪ್ರಸ್ತುತ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಕುರಿತು ಮಾಹಿತಿ ಹಾಗೂ ಕಾಲೇಜಿನ ಐಡಿ ಕಾರ್ಡ್ ತೋರಿಸಿ ಪಠ್ಯ ಪುಸ್ತಕ ಪಡೆಯಬಹುದು. ಈ ರೀತಿ ದಾನವಾಗಿ ಪಠ್ಯ ಪುಸ್ತಕ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಪಠ್ಯ ಪುಸ್ತಕವನ್ನು ಹಿಂತಿರುಗಿಸಬೇಕು.

ಪುಸ್ತಕ ಹಂಚಿಕೆ ಕಾರ್ಯಕ್ರಮ ಮೈಸೂರು ನಗರದಲ್ಲಿ ಪ್ರತಿ ವರ್ಷ ನಡೆಸಲಾಗುತ್ತದೆ. ಸಮಯದ ಕೊರತೆ ಹಾಗೂ ಆರ್ಥಿಕ ಕಾರಣಗಳಿಗೋಸ್ಕರ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ನಗರಕ್ಕೆ ಆಗಮಿಸಿ ಪುಸ್ತಕವನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಕಾಲೇಜು ಹಂತದ ಪಠ್ಯ ಪುಸ್ತಕವೊಂದರ ಬೆಲೆ ದುಬಾರಿಯಾಗಿರುತ್ತದೆ. ದೊಡ್ಡ ಮೊತ್ತವನ್ನು ವೆಚ್ಚ ಮಾಡಲು ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಆದರೆ, ನಿಮ್ಮಿಂದ ವಿದ್ಯಾದಾನ ಕಾರ್ಯಕ್ರಮದಡಿ ಬಡ ವಿದ್ಯಾರ್ಥಿಗಳು ಉಚಿತವಾಗಿ ಪಠ್ಯ ಪುಸ್ತಕಗಳನ್ನು ಪಡೆದು ಕೊಳ್ಳಬಹುದು. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಕಾಲೇಜು ಹಂತದ ಎಲ್ಲ ಪಠ್ಯ ಪುಸ್ತಕಗಳನ್ನು ದಾನವಾಗಿ ಪಡೆದು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.


ಪರಿಸರ ಉಳಿವಿಗೂ ಕೊಡುಗೆ: ಪ್ರತಿ ವರ್ಷ ಪಠ್ಯಪುಸ್ತಕ ಮುದ್ರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾಗದ ಬಳಕೆಯಾಗುತ್ತದೆ. ವಿದ್ಯಾದಾನದಂತಹ ಪಠ್ಯ ಪುಸ್ತಕ ಹಂಚಿಕೆ ಕಾರ್ಯಕ್ರಮ ರಾಜ್ಯದ ಎಲ್ಲ ಕಡೆಗಳಲ್ಲೂ ನಡೆದರೆ ಪಠ್ಯಪುಸ್ತಕ ಮುದ್ರಣ ಕಡಿಮೆಯಾಗುವುದಲ್ಲದೆ ಪರಿಸರ ಉಳಿವಿಗೆ ದೊಡ್ಡ ಕೊಡುಗೆ ನೀಡಿದಂತೆ ಆಗುತ್ತದೆ. ಪರಿಸರ ಉಳಿವಿನ ದೃಷ್ಟಿಯಿಂದಲೂ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು, ಪಠ್ಯ ಪುಸ್ತಕಗಳನ್ನು ನೀಡುವ ಹಾಗೂ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ವೃದ್ಧಿಯಾಗಬೇಕಾಗಿದೆ.

''ನಗರದಲ್ಲಿ ದಶಕದ ಹಿಂದೆ ಗಾರ್ಮೆಂಟ್ಸ್‌ಗಳಿಂದ ಬಟ್ಟೆಗಳನ್ನು ದಾನದ ರೂಪದಲ್ಲಿ ಪಡೆದು ಅದನ್ನು ಮಲೆಮಹದೇಶ್ವರ ಬೆಟ್ಟದ ಬುಡಕಟ್ಟು ಸಮುದಾಯದವರಿಗೆ ಹಂಚಿಕೆ ಮಾಡಿದೆವು. ಇದೇ ರೀತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ಏತಕ್ಕೆ ಹಂಚಿಕೆ ಮಾಡಬಾರದು ಎಂಬ ಆಲೋಚನೆ ಆ ಸಂದರ್ಭ ಹೊಳೆಯಿತು. ನಂತರ ಭಾರತೀಯ ಜೈನ್ ಸಂಘಟನೆಯ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ‘ನಿಮ್ಮಿಂದ ವಿದ್ಯಾದಾನ’ ಕಾರ್ಯಕ್ರಮವನ್ನು ಜಾರಿಗೊಳಿಸಿದೆವು. ಪ್ರತಿ ವರ್ಷ ನಾಲ್ಕೈದು ಸಾವಿರ ಪುಸ್ತಕಗಳನ್ನು ದಾನ ಪಡೆದು ಹಂಚಿಕೆ ಮಾಡಲಾಗುತ್ತಿದ್ದು, ಇದರ ಲಾಭವನ್ನು ನೂರಾರು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ನಾಲ್ಕೈದು ಸಾವಿರ ಪಠ್ಯಪುಸ್ತಕಗಳ ಉಚಿತ ಹಂಚಿಕೆಯಿಂದ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಲಕ್ಷ ರೂ.ಗಿಂತ ಹೆಚ್ಚಿನ ಹಣ ಉಳಿತಾಯ ಮಾಡಿದಂತೆ ಆಗಿದೆ. ಈ ಸಂಖ್ಯೆ ಮತ್ತಷ್ಟು ವೃದ್ಧಿಸಲು ಎಲ್ಲರ ಸಹಕಾರ ಅಗತ್ಯವಿದೆ.''

ಜೈನ್ ಪ್ರಕಾಶ್ ಗುಲೇಚಾ, ಪ್ರಾದೇಶಿಕ ಅಧ್ಯಕ್ಷ, ಭಾರತೀಯ ಜೈನ್ ಸಂಘಟನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net