

ಮಡಿಕೇರಿ
ಇಂದಿನ ಯವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವ ಮೂಲಕ ಐಎಎಸ್, ಐಪಿಎಸ್, ಐಆರ್‌ಎಸ್‌ನಂಥ ಅತ್ಯನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದು ವಾಣೀಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಂಗಾರು ಆರ್. ನಾಣಯ್ಯ ಹೇಳಿದರು.
ಕೊಡಗು ಗೌಡ ವಿದ್ಯಾ ಸಂಘ ವತಿಯಿಂದ ಸೋಮವಾರ ಇಲ್ಲಿನ ಗೌಡ ಸಮಾಜದಲ್ಲಿ ಏರ್ಪಡಿಸಿದ್ದ 2025ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಅರೆಭಾಷಿಕ ಗೌಡ ಜನಾಂಗದ ಹಿರಿಯರಿಗೆ ದೊಡ್ಡ ಮಟ್ಟದ ದೂರದೃಷ್ಟಿ ಇತ್ತು.
ಸಮರ್ಪಕ ಸಾರಿಗೆ ಸಂಪರ್ಕ ಇಲ್ಲದಿದ್ದ ದಿನಗಳಲ್ಲಿ ಹಳ್ಳಿಗಾಡಿನ ಜನರೂ ಮಡಿಕೇರಿಯಂಥ ಪಟ್ಟಣಗಳಿಗೆ ಬಂದು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎನ್ನುವ ಉದ್ದೇಶದಿಂದ ಮುಂದಾಲೋಚನೆ ಇಟ್ಟುಕೊಂಡು ಒಂದು ಶತಮಾನದ ಹಿಂದೆಯೇ ಕೊಡಗು ಗೌಡ ವಿದ್ಯಾಸಂಘವನ್ನು ಹುಟ್ಟುಹಾಕಲಾಗಿತ್ತು. ಅರೆಭಾಷಿಕ ಜನಾಂಗದ ಮೊದಲ ಐಎಎಸ್ ಅಧಿಕಾರಿ ಕೋಳಿಬೈಲು ಬೆಳ್ಯಪ್ಪ ಇದೇ ಗೌಡ ವಿದ್ಯಾಸಂಘದ ಕೊಡುಗೆ. ಇವರ ರೀತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾವಂತರು, ಉನ್ನತ ಅಧಿಕಾರಿಗಳನ್ನು ಸಮಾಜಕ್ಕೆ ನೀಡುವಲ್ಲಿ ಕೊಡಗು ಗೌಡ ವಿದ್ಯಾಸಂಘ ಮಹತ್ತರದ ಪಾತ್ರ ವಹಿಸಿದೆ ಎಂದರು.
ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲೆ ಆನೇರ ಜಾನಕಿ ಮೋಹನ್ ಮಾತನಾಡಿ ವಿದ್ಯಾಸಂಘದ ಪುರಸ್ಕಾರ ಎನ್ನುವುದು ಸಾಧನೆಗೆ ಸಂದ ಗೌರವ. ಸಾಧನೆಯ ಶಿಖರ ಏರಿದ ನಂತರ ನಡೆದು ಬಂದ ಹಾದಿ ನೆನಪಿಸಿಕೊಳ್ಳಬೇಕು. ಕೊಡಗು ಗೌಡ ವಿದ್ಯಾ ಸಂಘದ ಸೇವೆ ಹೀಗೆಯೇ ಮುಂದುವರಿಯಲು ಇಂದಿನ ಯುವ ಜನಾಂಗದ ಆಸಕ್ತಿಯ ಅಗತ್ಯವೂ ಇದೆ. ಸಂಘಟನೆ ಬಲವಾಗಬೇಕು. ಈಗಿನ ಜನಾಂಗ ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸ ತಿಳಿದುಕೊಳ್ಳಬೇಕು. ಸಂಸ್ಕೃತಿ ಬಗ್ಗೆ ಮಾಹಿತಿ ಇರುವ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು ಎಂದು ಹೇಳಿದರು.
ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ನಿವೃತ್ತ ಪ್ರಾಂಶುಪಾಲೆ ನಿಡ್ಯಮಲೆ ದೇವಕಿ ಅನುರಾಜ್ ಮಾತನಾಡಿ ಅರೆಭಾಷಿಕ ಗೌಡ ಜನಾಂಗದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಒಳ್ಳೆಯ ಹುದ್ದೆಗೆ ಹೋಗಬೇಕು. ಸಾಧನೆಯ ಹಾದಿ ಅಷ್ಟು ಸುಲಭ ಅಲ್ಲ. ಹಾಗೆಂದು ದೃಢ ಸಂಕಲ್ಪ, ಗುರಿ ಇದ್ದರೆ ಸಾಧನೆ ಕಷ್ಟವಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಈ ಪ್ರತಿಭೆಗಳನ್ನು ಮನೆಗಳಲ್ಲೇ ಕಂಡು ಹಿಡಿಯಬೇಕು. ಪೋಷಕರ ಈ ಕೆಲಸ ಮಾಡಲು ಬೇಕು. ಶಿಕ್ಷಕರು ಈ ಪ್ರತಿಭೆಗಳನ್ನು ಬೆಳಕಿಗೆ ತರಬೇಕು. ಮಕ್ಕಳು ಸ್ಪರ್ಧಾತ್ಮ ಪರೀಕ್ಷೆಗಳನ್ನು ಹೆಚ್ಚು ಬರೆಯಬೇಕು. ಉನ್ನತ ಹುದ್ದೆಗಳಿಗೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಮಾತನಾಡಿ ಕೊಡಗು ಗೌಡ ವಿದ್ಯಾಸಂಘ 1908ರಲ್ಲಿ ಆರಂಭವಾದಗಿನಿAದಲೂ ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಗ್ರಾಮೀಣ ಹಿನ್ನೆಲೆಯ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮೂಹ ಶೈಕ್ಷಣಿಕವಾಗಿ ಏಳಿಗೆ ಹೊಂದಬೇಕು ಎನ್ನುವ ಉದ್ದೇಶದಿಂದ ಕಾಲಕಾಲಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ 50 ವರ್ಷಗಳಿಂದ ಪ್ರತಿಭಾವಂತರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ.
ಸಂಘದ ಮಡಿಕೇರಿ ಕಟ್ಟಡವನ್ನು ವರ್ತಮಾನದ ಅಗತ್ಯತೆಗಳಿಗೆ ಅನುಗುಣವಾಗಿ ನವೀರಿಸಲಾಗುತ್ತಿದೆ. ಸಮುದಾಯದ ವಿದ್ಯಾರ್ಥಿಗಳಿಗಾಗಿಯೇ ಇಲ್ಲಿ ಒಂದು ವಿದ್ಯಾರ್ಥಿ ನಿಲಯ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಮೈಸೂರಿನಲ್ಲಿ ಇರುವ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಜನಾಂಗದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಉಚಿತ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ಮೈಸೂರು ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಚೆರಿಯಮನೆ ಬಿ. ರಾಮಚಂದ್ರ, ಕಾಫಿ ಬೆಳೆಗಾರರಾದ ತಳೂರು ಯಶೋಧ ರಾಮಣ್ಣ ಮಾತನಾಡಿದರು.
ಕೊಡಗು ಗೌಡ ವಿದ್ಯಾ ಸಂಘದ ಕಾರ್ಯದರ್ಶಿ ಪೇರಿಯನ ಕೆ. ಉದಯಕುಮಾರ್, ಖಜಾಂಚಿ ಕಾಳೇರಮ್ಮನ ಲತಾ ನಂದಕುಮಾರ್, ಉಪಾಧ್ಯಕ್ಷ ಅಮೆ ಸಿ. ಸೀತಾರಾಮ್ ಹಾಗೂ ನಿರ್ದೇಶಕರು ಇದ್ದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸೂದನ ಜಿ. ಧನ್ಯಶ್ರೀ, ಐ.ಡಿ.ಧೃತಿ ಹಾಗೂ ಪಿ.ಡಿ. ದೀಪ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಾರಿಕೆ ಪಿ. ದಿನೇಶ್ ಕುಮಾರ್ ಮಾತನಾಡಿ ಉನ್ನತ ಹುದ್ದೆಗೆ ಏರಲು ಎಲ್ಲರಿಗೂ ಸಾಮರ್ಥ್ಯ ಇದೆ. ಆದರೆ ಆತ್ಮವಿಶ್ವಾಸ ಮುಖ್ಯ. ನಮ್ಮ ಸಾಮರ್ಥ್ಯ ಬಗ್ಗೆ ನಂಬಿಕೆ ಇರಬೇಕು. ಆಗ ಏನಾದರೂ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು. ಆ ಭಾವನೆಯನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕು. ಪೋಷಕರು ಮಕ್ಕಳಿಗೆ ಡಾಕ್ಟರ್, ಇಂಜಿನಿಯರ್‌ಗಳಾಗುವAತೆ ಒತ್ತಡ ಹೇರದೆ ಅವರ ಆಸಕ್ತಿ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿ ಒತ್ತಡ ಹೇರುವುದರಿಂದ ಅವರು ಮಾನಸಿಕವಾಗಿ ಕುಂಠಿತಗೊAಡು ಆತ್ಮಹತ್ಯೆ, ಮನೆ ಬಿಟ್ಟು ಹೋಗುವಂಥ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ.
ಜೀವನ ಎಂಬುದು ಸಣ್ಣ ದಾರಿ ಇದ್ದ ಹಾಗೆ. ನಾವು ಏನನ್ನಾದರೂ ಸಾಧಿಸಬೇಕಾದರೆ ಒಳ್ಳೆಯ ದಾರಿಯಲ್ಲೇ ಸಾಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.