

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಆದರ್ಶಪ್ರಾಯರಾಗಿರುವಂಥ ನಡೆ- ನುಡಿಗಳನ್ನು ಪಾಲಕರು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಬೆಳೆಸುವ ಪಾಲಕತ್ವದ ಕಲೆಯನ್ನು ಮೈಗೂಡಿಸಿಕೊಂಡಾಗ ಮಕ್ಕಳೇ ನಮ್ಮ ಆಸ್ತಿಯಾಗಬಲ್ಲರು ಎಂದು ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ನಗರದ ವಿದ್ಯಾ. ಪಿ. ಹಂಚಿನಮನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ `ಕಲಾಕೌಸ್ತುಭ' ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶ್ರದ್ಧೆ, ಸಂಸ್ಕಾರ, ನಂಬಿಕೆಗಳನ್ನು ರೂಢಿಸಿಕೊಂಡಾಗ ಮಾತ್ರ ಮಕ್ಕಳು ಬೆಳೆಯುವ ಗಿಡವಾಗಬಲ್ಲರು. ಇಲ್ಲದಿದ್ದರೆ ಕೇವಲ ವಿದ್ಯುತ್ ಕಂಬಗಳ0ತಾಗುವರು. ಮಕ್ಕಳನ್ನು ಸದೃಢರನ್ನಾಗಿಸಲು ಅವಲಂಬನೆಯನ್ನು ಬಿಡಿಸಿ ಅವರ ಕೆಲಸ ಅವರೇ ಮಾಡಿಕೊಳ್ಳುವಂಥ ಅವಕಾಶ ಒದಗಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಪ್ರಲ್ಹಾದ ಹಂಚಿನಮನಿ ಮಾತನಾಡಿ, ಮಕ್ಕಳ ಸಮ್ಮುಖದಲ್ಲಿ ಶಿಕ್ಷಕರನ್ನು ಕಡೆಗಣಿಸುವಂತೆ ಮಾತನಾಡಬಾರದು. ಪಾಲಕರ ಆಶಯಗಳನ್ನು ಶಿಕ್ಷಕರೊಂದಿಗೆ ವಿನಿಮಯ ಮಾಡಿಕೊಂಡಾಗ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳು ಸರಿಯಾದ ರೀತಿಯಲ್ಲಿ ಬೆಳೆಯಬಲ್ಲರು ಎಂದರು.
ಪ್ರಾಚಾರ್ಯ ವಿದ್ವಾನ್ ನವೀನ್ ಭಟ್ ವಾರ್ಷಿಕ ವರದಿ ಮಂಡಿಸಿದರು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ `ನಮ್ಮ ಧಾರವಾಡ' ನೃತ್ಯರೂಪಕದ ಮೂಲಕ ಮಕ್ಕಳು ಧಾರವಾಡದ ಅನೇಕ ಪ್ರದೇಶಗಳು, ಮಹನೀಯರು, ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದರು.
ಹಂಚಿನಮನಿ ಸಂಸ್ಥೆಯ ಕಾರ್ಯದರ್ಶಿ ಮನೋಜ್ ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ ಹಾಗೂ ಪದಾಽಕಾರಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಇದ್ದರು.