

ಪುತ್ತೂರು: ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಸವಾಲುಗಳಿದ್ದು, ಹಲವು ಮಂದಿಯ ಶ್ರಮವಿದೆ. ಸಂಸ್ಥೆಯ ಲಾಭಾಂಶದ ಒಂದು ಅಂಶವನ್ನು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುತ್ತಿರುವುದು ಹೆಮ್ಮೆಯ ವಿಚಾರ. ಪಾಲಕರು ಸಂಸ್ಥೆಯ ಸಹಾಯಧನವನ್ನು ಶೈಕ್ಷಣಿಕ ವಿಚಾರಕ್ಕೆ ಬಳಸಬೇಕು. ಮಕ್ಕಳ ಚಟುವಟಿಕೆ ಮೇಲೆ ನಿಗಾ ಇಡುವ ಕಾರ್ಯವಾಗಬೇಕು ಎಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ. ರೈ ಹೇಳಿದರು.
ಪುತ್ತೂರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿದ್ಯಾನಿಧಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು. ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಎ.ಕೆ., ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಉಪಾಧ್ಯಕ್ಷ ಎನ್.ಸುಂದರ ರೈ, ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ, ಮಹಾಪ್ರಬಂಧಕ ವಸಂತ್ ಜಾಲಾಡಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ನಿವೃತ್ತ ಶಾಖಾ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ., ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಪಿ. ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಕ್ಷೇತ್ರ ಪವಿತ್ರವಾಗಿದ್ದು, ಸಂಘದ ಮೂಲಕ ಹಳ್ಳಿ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಅಧ್ಯಕ್ಷರು ಬಾಲ್ಯದ ಜೀವನದಲ್ಲಿ ಪಟ್ಟ ಕಷ್ಟವನ್ನು ಯುವಪೀಳಿಗೆ ಪಡಬಾರದು ಎಂಬ ನಿಟ್ಟಿನಲ್ಲಿ ಸಹಾಯಧನ ವಿತರಣೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಆದಾಯದಲ್ಲಿ ಇಬ್ಬರಿಗಾದರೂ ನೆರವಾಗುವ ಕಾರ್ಯವಾಗಬೇಕು.
| ಶಶಿಕುಮಾರ್ ರೈ ಬಾಲ್ಯೊಟ್ಟು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ