ವಿದ್ವಾನ್ ಕುನ್ನಕ್ಕುಡಿ ಎಂ. ಬಾಲಮುರಳಿಕೃಷ್ಣ ಅವರಿಂದ ಸಂಗೀತ ಕಛೇರಿ

Music
Published on

ಮೈಸೂರು: ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ವಿದ್ವಾನ್ ಕುನ್ನಕ್ಕುಡಿ ಎಂ. ಬಾಲಮುರಳಿಕೃಷ್ಣ ಅವರು ಫೆ.24 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-264 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಇವರಿಗೆ ವಿದ್ವಾನ್ ಎಚ್.ಎನ್.ಭಾಸ್ಕರ್ (ವಯೊಲಿನ್), ವಿದ್ವಾನ್ ಅರ್ಜುನ್‌ಕುಮಾರ್(ಮೃದಂಗ), ವಿದ್ವಾನ್ ಜಿ.ಎಸ್.ರಾಮಾನುಜಂ(ಘಟಂ) ಸಾಥ್ ನೀಡಲಿದ್ದಾರೆ.

ವಿದ್ವಾನ್ ಕುನ್ನಕ್ಕುಡಿ ಎಂ. ಬಾಲಮುರಳಿಕೃಷ್ಣ ಅವರು ಖ್ಯಾತ ಕರ್ನಾಟಕ ಸಂಗೀತ ಕಲಾವಿದರಾದ ಪದ್ಮವಿಭೂಷಣ ಪಿ.ಎಸ್. ನಾರಾಯಣಸ್ವಾಮಿ ಅವರ ಬಳಿ ಎರಡು ದಶಕಗಳ ಕಾಲ ಶಿಷ್ಯವೃತ್ತಿ ಕೈಗೊಂಡಿದ್ದಾರೆ. ಜೊತೆಗೆ ಶ್ರೀ ಕಾರೈಕ್ಕುಡಿ ಆರ್. ಮಣಿ ಅವರ ಬಳಿ ಮೃದಂಗವಾದನವನ್ನು ಅಭ್ಯಸಿಸಿದ್ದಾರೆ. 9ನೆಯ ವರ್ಷದಲ್ಲಿಯೇ ಸಂಗೀತ ಕಚೇರಿ ನೀಡಿದ ಬಾಲಪ್ರತಿಭೆ. ಕಳೆದ ಎರಡೂವರೆ ದಶಕಗಳಿಂದಲೂ ದೇಶ ವಿದೇಶಗಳಲ್ಲಿ ಸಂಗೀತ ಪ್ರಸ್ತುತಿ ಪಡಿಸುತ್ತ ಶ್ರೋತೃಗಳ ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಕಛೇರಿಗಳೆಂದರೆ ಅಪೂರ್ವ ಮನೋಧರ್ಮದ ಅಭಿಜಾತ ಅಭಿವ್ಯಕ್ತಿ. ಸಾಮಾನ್ಯವಾಗಿ ಪ್ರಾತ್ಯಕ್ಷಿಕೆಗಳಲ್ಲಿ ಮಾತ್ರ ಕಾಣಸಿಗುವ ಹಲವಾರು ತಾಳದ ನಡೆಗಳಲ್ಲಿ ನಿಷ್ಣಾತರಾಗಿರುವ ಇವರು ರಾಗ-ತಾಳ-ಪಲ್ಲವಿ ಪ್ರಸ್ತುತಿಯಲ್ಲಿ ಅಸಾಧಾರಣ ಪ್ರಭುತ್ವ ಗಳಿಸಿರುವರು.

ಪ್ರಯೋಗಶೀಲತೆ ಇವರ ಸಂಗೀತದ ಮತ್ತೊಂದು ಗಮನಾರ್ಹ ಆಯಾಮ. ಸದಾ ಹೊಸತಿಗಾಗಿ ಹಂಬಲಿಸುವ ಇವರ ಗಾಯನಶೈಲಿ ತುಂಬ ಆಪ್ಯಾಯಮಾನವಾದುದು. ಹಿಂದುಸ್ತಾನಿ ಸಂಗೀತ, ಪಾಶ್ಚಾತ್ಯ ಸಂಗೀತಗಳ ಸಹಯೋಗದಲ್ಲಿ ಕರ್ನಾಟಕ ಸಂಗೀತವನ್ನು ಪ್ರಸ್ತುತಿಪಡಿಸುವುದು ಇವರ ವೈಶಿಷ್ಟ್ಯ. ಜುಗಲ್‌ಬಂದಿ ಮತ್ತು ಸಮ್ಮಿಶ್ರ ಸಂಗೀತ ಇವರ ಪ್ರಯೋಗಪ್ರಿಯತೆಗೆ ಸಾಕ್ಷಿ ನುಡಿಯುತ್ತದೆ. ಕರ್ನಾಟಕ ಸಂಗೀತದ ಜೀವಜೀವಾಳವಾದ ಗಮಕಗಳ ವೈವಿಧ್ಯಕ್ಕೆ ಹೆಚ್ಚು ಗಮನ ನೀಡುವ ಬಾಲಮುರಳಿಕೃಷ್ಣ ಅವರು ಶ್ರದ್ಧೆ ಮತ್ತು ಸಂಗೀತದ ಮೂಲ ಸ್ವರೂಪದತ್ತ ಹೆಚ್ಚು ಗಮನ ಹರಿಸುವುದನ್ನು ಧ್ಯೇಯವಾಗಿಸಿಕೊಂಡಿದ್ದಾರೆ. ಆಯ್ದ ಕೆಲವು ಶಿಷ್ಯರುಗಳನ್ನು ಈ ಹಿನ್ನೆಲೆಯಲ್ಲಿ ರೂಪಿಸುತ್ತಿದ್ದಾರೆ ಕೂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net