

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮಲ್ಲರಮಾಡಿ ನಿವಾಸಿ ನೃತ್ಯಪಟು ವಿದುಷಿ ಕುಮಾರಿ ಚೈತ್ರ ಭಟ್ ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭ ಮಂಗಳೂರಿನ ನೃತ್ಯಭಾರತಿ ಸಹಯೋಗದಲ್ಲಿ ಜೂ.22ರಂದು ಸಂಜೆ 6.15ರಿಂದ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.
ಶನಿವಾರ ರಾತ್ರಿ ಗಂಟೆ 7.30ರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉಳ್ಳಾಲ ಮೋಹನ್ ಕುಮಾರ್ ಮತ್ತು ಸುರತ್ಕಲ್ ಸುಧಾಕರ ರಾವ್ ಪೇಜಾವರ ಶುಭಾಶಂಸನೆ ಮಾಡುವರು.
ಚೈತ್ರ ಭಟ್ ಅವರ ಗುರು ಗೀತಾ ಸರಳಾಯರ ನೃತ್ಯ ನಿರ್ದೇಶನವಿದ್ದು, ಹಿಮ್ಮೇಳದಲ್ಲಿ ವಿದುಷಿ ರಶ್ಮಿ ಚಿದಾನಂದ(ನಟುವಾಂಗ), ಸ್ವರಾಗ್, ಮಾಹೆ(ಹಾಡುಗಾರಿಕೆ), ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್(ಮೃದಂಗ), ಬೆಂಗಳೂರಿನ ದೂರದರ್ಶನ ಕಲಾವಿದ ವಿದ್ವಾನ್ ಗಣೇಶ್ ಕೆ.ಎಸ್.(ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು.
ಧರ್ಮಸ್ಥಳ ಗ್ರಾಮದ ಮಲ್ಲರಮಾಡಿ ನಿವಾಸಿ ವಿದುಷಿ ಕುಮಾರಿ ಚೈತ್ರ ಭಟ್ ದಿ.ಗೋಪಾಲಕೃಷ್ಣ ಭಟ್ ಮತ್ತು ಮೀನಾಕ್ಷಿ ಜಿ.ಭಟ್ ದಂಪತಿಯ ದ್ವಿತೀಯ ಪುತ್ರಿ.
ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನೃತ್ಯ ಕಲಾವಿದೆಯಾಗಿ ಮತ್ತು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕಲಾಕೇಂದ್ರದಲ್ಲಿ ನೃತ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋಹಿನಿಯಾಟ್ಟಂ, ಕಥಕ್ ಮತ್ತು ಜನಪದ ನೃತ್ಯ ಪ್ರಕಾರಗಳಲ್ಲಿಯೂ ವಿಶೇಷ ಅನುಭವ, ಪರಿಣತಿ ಹೊಂದಿರುವ ಈಕೆ ಪ್ರಸಾದನ, ನಟುವಾಂಗ ಮತ್ತು ನೃತ್ಯ ಸಂಯೋಜನೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ ಭರವಸೆಯ ನೃತ್ಯ ಕಲಾವಿದೆಯಾಗಿ ಬೆಳೆಯುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ನಿರಂತರ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನವನ್ನು ಚೈತ್ರ ಭಟ್ ಸದಾ ಧನ್ಯತೆಯಿಂದ ಸ್ಮರಿಸುತ್ತಾರೆ.