ತತ್ವಜ್ಞಾನ ಸಾಧನೆಗೆ ಮೊದಲ ಮೆಟ್ಟಿಲು; ಪೇಜಾವರ ಸ್ವಾಮೀಜಿ ಆಶೀರ್ವಚನ

swamiji web
Published on

ಪಡುಬಿದ್ರಿ: ತತ್ವಜ್ಞಾನಕ್ಕೆ ಸಾವಿಲ್ಲ.ಅದು ಜೀವನದ ಜತೆಯಲ್ಲೇ ಸಾಗಿ ಮುಂದಿನ ಜನ್ಮದಲ್ಲಿ ಸಾಧನೆಗೆ ಮೊದಲ ಮೆಟ್ಟಿಲಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಪಲಿಮಾರು ಮೂಲ ಮಠದಲ್ಲಿ ಪಲಿಮಾರು- ಭಂಡಾರಕೇರಿ ಉಭಯ ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆರಾಧನೋತ್ಸವ ಹಾಗೂ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬುಧವಾರ ಆಶೀರ್ವಚನ ನೀಡಿದರು.

ಭಗವಂತನ ಸರ್ವೋತ್ತಮ ತತ್ವ ಪ್ರತಿಪಾದನೆ ಮಾಡುವುದಕ್ಕೋಸ್ಕರ ಸಕಲ ಶಾಸ್ತ್ರಗಳು ಹುಟ್ಟಿವೆ. ಅಂತಹ ಶಾಸ್ತ್ರಗಳ ಪ್ರಮೇಯವನ್ನು ಸಾಧಕ ಪ್ರಪಂಚಕ್ಕೆ ನಿರಂತರ ಬೋಧಿಸುತ್ತಿರಬೇಕು. ಗುರುಗಳಾಗಿದ್ದ ವಿದ್ಯಾಮಾನ್ಯ ತೀರ್ಥರು ಮಧ್ವಾಚಾರ್ಯರ ಆದೇಶವನ್ನು ಬದುಕಿನುದ್ದಕ್ಕೂ ಪಾಲನೆ ಮಾಡಿಕೊಂಡು ಬಂದವರು. ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಿರಂತರ ಪ್ರವಚನ ಮೂಲಕ ತತ್ವಜ್ಞಾನ ಉಣ ಬಡಿಸುವ ಮಹತ್ಕಾರ್ಯ ಆರಂಭಿಸಿದ್ದರು. ಪರ್ಯಾಯದ ಎರಡು ವರ್ಷದ ಅವಧಿಯಲ್ಲಿ ಆಬಾಲ ವೃದ್ಧರಿಗೆ ಕೃಷ್ಣ ಮಠದಲ್ಲಿ ಆಶ್ರಯ ಕಲ್ಪಿಸಿ ಸರ್ವಮೂಲದ ಸಮಗ್ರ ಜ್ಞಾನಾರ್ಜನೆ ಯೋಜನೆ ಕೈಗೊಂಡಿದ್ದರು. ಅದು ಇಂದಿಗೂ ಮೇಲ್ಪಂಕ್ತಿಯಾಗಿ ನಡೆಯುತ್ತಿದೆ ಎಂದು ಬಣ್ಣಿಸಿದರು.

ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕಾಣದೆ ಇದ್ದ ದೇವರನ್ನು ಕಾಣಿಸುವ ಹಾಗೆ ಮಾಡುವವರು ಗುರುಗಳು. ಗುರುಗಳ ಅನುಗ್ರಹ ಪ್ರಮುಖವಾದದ್ದು. ಇದು ನಮ್ಮ ಪರಂಪರೆ ನಮಗೆ ಕಲಿಸಿಕೊಟ್ಟಿದೆ. ಮಧ್ವಾಚಾರ್ಯರು ಅದನ್ನು ಕೃತಿ, ಅನುಷ್ಠಾನ ಮೂಲಕ ತೋರಿಸಿದ್ದಾರೆ ಎಂದರು.
ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥರು ಆಶೀರ್ವಚನ ನೀಡಿದರು.

ಮೈಸೂರಿನ ವಿದ್ವಾಂಸ ಸಿ.ಎಚ್. ಶ್ರೀನಿವಾಸ ಮೂರ್ತಿ ಆಚಾರ್ ಅವರಿಗೆ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರ ನೆನಪಿನಲ್ಲಿ ನೀಡಲಾಗುವ ಶ್ರೀಪರವಿದ್ಯಾ ಪ್ರಶಸ್ತಿ ಹಾಗೂ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೆಟ್ ಪಡೆದ ಹರಿಕೃಷ್ಣ ಪುನರೂರು, ಚೆನ್ನೈನ ಆನಂದ್ ಅವರನ್ನು ಗೌರವಿಸಲಾಯಿತು. ಮುರಲಿ ಕಡೆಕಾರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ವಿದ್ವಾಂಸ ಮೋಹನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಗುರುಗಳಾದ ವಿದ್ಯಾಮಾನ್ಯರಿಗೆ ಗ್ರಂಥ ಅಂದರೆ ಸಾಕ್ಷಾತ್ಕಾರ. ಅಪರೋಕ್ಷ ಜ್ಞಾನ ಪಡೆದವರು ಗುರುಗಳು, ಶಾಸ್ತ್ರಾಪರೋಕ್ಷ ಅವರಿಗೆ ಚೆನ್ನಾಗಿತ್ತು. ನಿರಂತರ ಶಾಸ್ತ್ರದಲ್ಲಿ ಮುಳುಗುತ್ತಿದ್ದರು. ಗುರುಗಳನ್ನು ಉಪಸೃಷ್ಟಿ ಮಾಡಿದರೆ ಗುರುಗಳು ಎಲ್ಲವನ್ನೂ ಕರುಣಿಸುತ್ತಾರೆ. ಗುರು ಕಾರುಣ್ಯ ಸರಣಿ ಟೀಕಾಕೃತ ಪಾದರ ಮೇಲೆ ಭಕ್ತಿ, ಆಚಾರ್ಯರ ಮೇಲೆ ಶ್ರದ್ಧೆ ಅವರಿಗೆ ಗಾಢವಾಗಿತ್ತು.
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net