

ಅವಿನ್ ಶೆಟ್ಟಿ ಉಡುಪಿ
ಕೋವಿಡ್-19 ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ ಗೊಂದಲದ ಗೂಡಾಗಿದೆ. ರಾಜ್ಯ ಸರ್ಕಾರ ವಿದ್ಯಾಗಮ-2 ಆರಂಭಿಸಿದ್ದು, ಸ್ಥಳೀಯ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಆದರೆ ದೂರದ ಊರುಗಳಿಂದ ಶಿಕ್ಷಣ ಪಡೆಯಲು ವಿದ್ಯಾರ್ಥಿ ನಿಲಯಗಳನ್ನು ಅವಲಂಬಿಸಿದ್ದ ವಿದ್ಯಾರ್ಥಿಗಳು ವಿದ್ಯಾಗಮದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಸರ್ಕಾರದ ದ್ವಂದ್ವ ನೀತಿ ಎಂದು ಪಾಲಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಚಿತ್ರಮಂದಿರ, ದೇವಸ್ಥಾನ, ಮದುವೆ ಸಭಾಂಗಣ ಎಲ್ಲದಕ್ಕೂ ಅವಕಾಶ ಕೊಟ್ಟಿದ್ದರೂ ಹಾಸ್ಟೆಲ್‌ಗಳಿಗೆ ಮಾತ್ರ ಪ್ರವೇಶ ನಿರಾಕರಿಸುವುದು ಯಾವ ನ್ಯಾಯ ಎನ್ನುವುದು ಪ್ರಶ್ನೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೇ.30ರಷ್ಟು ಹೊರ ಜಿಲ್ಲೆಯ ಮಕ್ಕಳು ಹಾಸ್ಟೆಲ್‌ನಲ್ಲಿ ಓದುತ್ತಿದ್ದಾರೆ. ವಿಜಯಪುರ, ಕಲಬುರಗಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕೋಡಿ ಮೊದಲಾದ ಜಿಲ್ಲೆಗಳ 6ರಿಂದ 9ನೇ ತರಗತಿ ಕಲಿಯುವ ನೂರಾರು ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 15 ಪ್ರಿ ಮೆಟ್ರಿಕ್, 4 ಆಶ್ರಮ ಶಾಲೆಗಳ 3 ಪ್ರಿ ಮೆಟ್ರಿಕ್, ಹಿಂದುಳಿದ ವರ್ಗ ಇಲಾಖೆಯ ಮೆಟ್ರಿಕ್ ಪೂರ್ವ ಉಡುಪಿಯಲ್ಲಿ 7, ಕುಂದಾಪುರದಲ್ಲಿ 7 ಹಾಸ್ಟೆಲ್‌ಗಳಿವೆ. ದ.ಕ. ಜಿಲ್ಲೆಯಲ್ಲಿ 20ಕ್ಕೂ ಅಧಿಕ ಹಾಸ್ಟೆಲ್‌ಗಳಿವೆ. ಇವುಗಳಲ್ಲಿ ಕೆಲವು ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಅವರ ಊರುಗಳಲ್ಲೇ ವಿದ್ಯಾಗಮ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆಗಳು ಹೇಳುತ್ತಿವೆ.
ವಾರ್ಡನ್, ಅಧಿಕಾರಿಗಳಿಗೆ ಪಾಲಕರಿಂದ ಕರೆ
ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಹಾಸ್ಟೆಲ್‌ಗಳಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. 6ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಕೋವಿಡ್ ನಿಯಮದಡಿ ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಸ್ಥಳೀಯ ಮಕ್ಕಳು ಮಾತ್ರ ವಿದ್ಯಾಗಮ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ. ವಾರ್ಡನ್‌ಗಳಿಗೆ, ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಕರೆ ಮೇಲೆ ಕರೆ ಮಾಡಿ ನಮ್ಮನ್ನು ಹಾಸ್ಟೆಲ್‌ಗೆ ಕರೆಸಿಕೊಳ್ಳುವಂತೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಪಾಲಕರು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಕೋರುತ್ತಿದ್ದಾರೆ. 6ನೇ ತರಗತಿಗೆ ಹೊಸ ದಾಖಲಾತಿಯೂ ಆರಂಭವಾಗದ ಕಾರಣ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುವ ಕನಸು ಭಗ್ನವಾಗಿದೆ.
ಉಡುಪಿ ಜಿಲ್ಲೆಯ ಹಾಸ್ಟೆಲ್‌ನಲ್ಲಿದ್ದುಕೊಂಡು ಸುತ್ತಮುತ್ತಲ ಶಾಲೆಗಳಲ್ಲಿ ಕಲಿಯುತ್ತಿದ್ದ 6ರಿಂದ 9ನೇ ತರಗತಿ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರ್ಯಾಯ ಯೋಜನೆ ರೂಪಿಸುತ್ತಿದ್ದೇವೆ. ಹಾಸ್ಟೆಲ್‌ಗಳು ತೆರೆಯುವವರೆಗೆ ಅವರ ಊರಿನ ಶಾಲೆಗಳಲ್ಲಿ ವಿದ್ಯಾಗಮದಲ್ಲಿ ಭಾಗವಹಿಸಲು ಅವಕಾಶ ಕೊಡುವಂತೆ ಉಪ ನಿರ್ದೇಶಕರು, ಬಿಇಒಗಳೊಂದಿಗೆ ಚರ್ಚಿಸಿದ್ದೇವೆ. ಈಗಾಗಲೇ ಮೂವರಿಗೆ ಅವಕಾಶ ಲಭಿಸಿದೆ. ಆಸಕ್ತ ವಿದ್ಯಾರ್ಥಿಗಳು, ಪಾಲಕರು 94489 99353 ಸಂಪರ್ಕಿಸಬಹುದು.
- ಎಚ್.ಎನ್. ನಾಗೂರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಉಡುಪಿ
ಇಲಾಖೆ ಹೊರಡಿಸಿದ ಕೋವಿಡ್ ಮಾರ್ಗಸೂಚಿ ಪ್ರಕಾರ ಸದ್ಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರಿ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಸ್ಟೆಲ್‌ನಲ್ಲಿದ್ದ ಹೊರ ಜಿಲ್ಲೆ ವಿದ್ಯಾರ್ಥಿಗಳಿಗೆ ಸಮಸ್ಯೆ ನಿಜ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ, ಹೊಸ ದಾಖಲಾತಿ ಬಗ್ಗೆ ವಿದ್ಯಾರ್ಥಿ, ಪೋಷಕರಿಂದ ಹೆಚ್ಚಿನ ವಿಚಾರಣೆ ಬರುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಇಲಾಖೆ ಈ ಬಗ್ಗೆ ಹೊಸ ಆದೇಶ ಹೊರಡಿಸುವ ನಿರೀಕ್ಷೆ ಇದೆ.
- ಅನಿತಾ, ಉಪ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ
ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಪ್ರಿ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ 6ರಿಂದ 9ನೇ ತರಗತಿವರೆಗೆ ಹೊರ ಜಿಲ್ಲೆಯ 700ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾಗಮ ಯೋಜನೆಯಿಂದ ವಂಚಿತರಾಗದಂತೆ ಆಯಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಬಿಇಒ ಅವರೊಂದಿಗೆ ಚರ್ಚಿಸಿ ಸ್ಥಳೀಯ ಶಾಲೆಗಳಲ್ಲಿ ವಿದ್ಯಾಗಮದಲ್ಲಿ ಭಾಗವಹಿಸುವಂತೆ ಅವಕಾಶ ನೀಡಿದ್ದೇವೆ.
- ಯೋಗೀಶ್ ಕುಮಾರ್, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ದ.ಕ.