ಉಪಕಾರ ಮಾಡುವುದೇ ಮನುಷ್ಯ ಧರ್ಮ...

Patla Lead
Published on

ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ

'ಯಕ್ಷಧ್ರುವ ಪಟ್ಲಾಶ್ರಯ' ಗೃಹ ಸಮುಚ್ಚಯದ ಭೂಮಿಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನಕ್ಕೆ ಭವ್ಯವಾದ ಇತಿಹಾಸವಿದೆ. ಅದರಿಂದ ಸುಸ್ಕೃತ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ. ಯಕ್ಷ ಕಲಾವಿದರ ಏಳಿಗೆಗಾಗಿ ಇಂತಹ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ. ಪರರಿಗೆ ಉಪಕಾರ ಮಾಡುವುದೇ ಮನುಷ್ಯ ಧರ್ಮ. ಆ ನಿಟ್ಟಿನಲ್ಲಿ ಪಟ್ಲ ಫೌಂಡೇಷನ್​ನ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು.

Patla 3
ಉಡುಪಿಯ ಕೊಡವೂರು ಲಕ್ಷ್ಮೀನಗರದ ಗರ್ಡೆಯಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್​ ವತಿಯಿಂದ ಯಕ್ಷಗಾನ ಕಲಾವಿದರಿಗಾಗಿ ನಿರ್ಮಾಣಗೊಳ್ಳಲಿರುವ ಯಕ್ಷಧ್ರುವ ಪಟ್ಲಾಶ್ರಯ ಗೃಹ ಸಮುಚ್ಚಯ ಕಾಮಗಾರಿಗೆ ಏ.19ರಂದು ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

100 ಮನೆ ನಿರ್ಮಾಣ ಯೋಜನೆ

Patla 2
ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಸ್ಥಾಪಕಾಧ್ಯಕ್ಷ ಸತೀಶ ಪಟ್ಲ ಪ್ರಾರ್ಥನೆಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್​ ಆರಂಭಗೊಂಡು 10 ವರ್ಷ ಆಗಿದೆ. ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯಡಿ ಕಲಾವಿದರಿಗಾಗಿ 100 ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಅದರಲ್ಲಿ 20 ಮನೆಗಳಿರುವ ಗೃಹಸಮುಚ್ಚಯಕ್ಕೆ ಭೂಮಿಪೂಜೆ ಮಾಡಲಾಗುತ್ತಿದೆ. ಆರಂಭದ ಕಾರ್ಯ ಶೃಂಗೇರಿ ಶ್ರೀಗಳಿಂದ ಆಗುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಫೌಂಡೇಷನ್​ನ ಮಾದರಿ ಕಾರ್ಯ

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಇದೊಂದು ಮಾದರಿ ಕಾರ್ಯವಾಗಿದೆ. ಪಟ್ಲ ಫೌಂಡೇಷನ್​ನ ಎಲ್ಲ ಸಮಾಜಮುಖಿ ಕೆಲಸಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಗೃಹ ಸಮುಚ್ಚಯಕ್ಕೆ ಜಾಗ ದಾನ ಮಾಡಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ ದಂಪತಿಯನ್ನು ಸನ್ಮಾನಿಸಲಾಯತು.

ಫೌಂಡೇಷನ್​ನ ಕೋಶಾಧಿಕಾರಿ ಸಿಎ ಸುಧೇಶಕುಮಾರ ರೈ, ಧಾರ್ಮಿಕ ಮುಖಂಡ ಕೆ.ಕೆ. ಶೆಟ್ಟಿ ಮಧೂರು, ಉಡುಪಿ ಯಕ್ಷಧ್ರುವ ಪಟ್ಲ ಫೌಂಡೇಷನ್​ನ ಗೌರವಾಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಉಡುಪಿ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಿವಾಕರ ಶೆಟ್ಟಿ ತೋಟದಮನೆ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಸಾದ ಶೆಟ್ಟಿ, ಸುಧಾಕರ ಆಚಾರ್ಯ ಇತರರು ಉಪಸ್ಥಿತರಿದ್ದರು. ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಸಚಿವ ಪ್ರಮೋದ ಮಧ್ವರಾಜ್​ ಪಾಲ್ಗೊಂಡಿದ್ದರು.

ಫೌಂಡೇಷನ್​ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ವಿದ್ವಾನ್​ ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.

ಗಮನ ಸೆಳೆದ ಬಾಲ ಶಂಕರರು

Patla Box
ಸಭಾ ಕಾರ್ಯಕ್ರಮದ ಮೊದಲು 'ತೆಂಕು-ಬಡಗು ನಾದ ವೈಕುಂಠ' ಎಂಬ ಭಾಗವತಿಕೆ ಕಾರ್ಯಕ್ರಮ ನಡೆಯಿತು. ಭಾಗವತರಾದ ಡಾ. ಪ್ರಖ್ಯಾತ ಶೆಟ್ಟಿ ಅಳಿಕೆ, ಸೃಜನ್​ ಗಣೇಶ ಹೆಗಡೆ ಭಾಗವತಿಕೆ ನಡೆಸಿದರು. ಹಿಮ್ಮೇಳದಲ್ಲಿ ಸ್ಕಂದ ಕೊನ್ನಾರ್​, ಸಮರ್ಥ ಉಡುಪಿ, ಶಶಿ ಆಚಾರ್ಯ ಬೆಳ್ಕಳೆ ಇವರು ಸಾಥ್​ ನೀಡಿದರು. ನಾವುಂದದ ವೇದಮೂರ್ತಿ ಲಕ್ಷ್ಮೀಶ ಅಡಿಗ ಅವರ ವಸಂತ ಶಿಬಿರದ ನಾಲ್ವರು ಪುಟಾಣಿ ವಟುಗಳು ಶ್ರೀ ಶಂಕರಾಚಾರ್ಯರ ವೇಷಭೂಷಣ ತೊಟ್ಟು ಶ್ರೀಗಳ ಆಶಯದಂತೆ ಅವರ ಸಮ್ಮುಖದಲ್ಲಿ ಆಸೀನರಾಗಿರುವುದು ಎಲ್ಲರ ಗಮನ ಸೆಳೆಯಿತು.

ಚಿಣ್ಣರಿಗೆ ರಾಮ-ಕೃಷ್ಣನಂತೆ ವೇಷಭೂಷಣ ತೊಡಿಸಿ ಪಾಲಕರು ಸಂತಸಗೊಳ್ಳುತ್ತಾರೆ. ಅದೇರೀತಿ ದೇಶದಲ್ಲಿ ಸನಾತನ ಧರ್ಮ, ಅದ್ವೈತ ಸಿದ್ಧಾಂತ ಪ್ರಸಾರ ಮಾಡಿದ ಶ್ರೀ ಶಂಕರಾಚಾರ್ಯರ ವೇಷಭೂಷಣವನ್ನೂ ಚಿಣ್ಣರಿಗೆ ಮಾಡಬೇಕು. ಇದರಲ್ಲಿ ಕೀಳರಿಮೆ ಬೇಡ. ಮಕ್ಕಳಿಗೆ ಶ್ರೀಶಂಕರ ಸಾಧನೆ ಅರಿಯಲು, ಅವರ ಜೀವನದ ಶ್ರೇಷ್ಠ ಮೌಲ್ಯ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮೇ 2ರಂದು ಶಂಕರ ಜಯಂತಿ ಇದ್ದು, ಪಾಲಕರು ತಮ್ಮ ಮಕ್ಕಳಿಗೆ ಶಂಕರಾಚಾರ್ಯರ ವೇಷಭೂಷಣ ತೊಡಿಸಲೆಂದು ಆಶಿಸುತ್ತೇವೆ. | ವಿಧುಶೇಖರ ಭಾರತೀ ಸ್ವಾಮೀಜಿ. ಶೃಂಗೇರಿ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net