ಡಿ.12ಕ್ಕೆ ವಿಧಾನಸೌಧ ಮುತ್ತಿಗೆ : ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ

dd
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ
Published on

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಸರ್ಕಾರಕ್ಕೆ ನವೆಂಬರ್ ಅಂತದವರೆಗೂ ಗಡುವು ನೀಡಿದ್ದು, ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಡಿ.12 ರಂದು ವಿಧಾನಸೌಧದೆದುರು ನಮ್ಮ ಪ್ರತಿಭಟನೆ ಶತಸಿದ್ಧ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಮೀಪದ ಮುಕಾರ್ತಿಹಾಳ ಗ್ರಾಮದಲ್ಲಿ ಬುಧವಾರ ನಡೆದ ವೀರರಾಣಿ ಕಿತ್ತೂರು ಚನ್ನಮ್ಮನವರ 244ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಹಕ್ಕೋತ್ತಾಯ ಮಂಡಿಸಿದರು.

ಮೀಸಲಾತಿಗೆ ನಾವು ಸಂಘಟನಾತ್ಮಕವಾಗಿ ನಡೆಸಿದ 712 ಕಿ.ಮೀ. ಪಾದಯಾತ್ರೆ ಕಂಡು ಕೆಲ ಸಮಾಜಗಳು ಹೊಟ್ಟೆಕಿಚ್ಚು ಪಡುತ್ತಿವೆ. ನಮ್ಮಲ್ಲಿನ 3 ಜಾತಿಗಳು ಮೀಸಲಾತಿಗಾಗಿ ಹೋರಾಟ ಮಾಡಿದಾಗ ನಾವು ನಿಮಗೆ ಬೆಂಬಲಿಸಿದ್ದನ್ನು ಮರೆಯಬಾರದು. ಈಗ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ನಾನು ಹೋರಾಟಕ್ಕಿಳಿದಾಗ ನಿಮಗೆ ಹೊಟ್ಟೆಯುರಿ ಏಕೆ ಎಂದು ಕುಟುಕಿದರು.

ಮುಂದೊಂದು ದಿನ ನಮ್ಮವರು ಸಿಎಂ ಆಗುವುದನ್ನು ಯಾರೂ ತಡೆಯಲಾಗದು. ನಮ್ಮವರು ಸಿಎಂ ಆಗಲು ಯಾವುದೇ ಪಕ್ಷ ಅವಕಾಶ ನೀಡಿದರೂ ಅದಕ್ಕೆ ನಮ್ಮ ಸಮಾಜದ ಸಹಮತ ಪಕ್ಷಾತೀತವಾಗಿರಲಿದೆ. ನಮ್ಮಲ್ಲಿ ಸದ್ಯಕ್ಕೆ 26 ಜನ ಶಾಸಕರಿದ್ದರೂ 20 ಕ್ಕೂ ಅಧಿಕ ಜನ ಶಾಸಕರು ನಮ್ಮ ಮೀಸಲಾತಿ ಹೋರಾಟ ಬೆಂಬಲಿಸಿದ್ದಾರೆ. 4-5 ಜನ ಶಾಸಕರು ಮಾತ್ರ ಯಾಕೋ ದೂರ ಸರಿದಿದ್ದಾರೆ ಎಂದರು.

ಶಾಸಕ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಕಾರ್ತಿಹಾಳದಲ್ಲಿ ಚನ್ನಮ್ಮಳ ಪುತ್ಥಳಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ರಾಷ್ಟ್ರೀಯ ಯುವ ಘಟಕದ ಪ್ರದಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, ನಿವತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಬಸೆಟ್ಟಿ ಮಾತನಾಡಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಸಾಯಬಣ್ಣ ಮಸಬಿನಾಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸಂಗನಗೌಡ ಕೋನರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಗೌಡ ಪಾಟೀಲ, ಪ್ರಮುಖರಾದ ಶಶಿಧರ ಮಾಮನಿ, ಎಚ್.ಜಿ. ಕಮತಗಿ, ಶ್ರೀಶೈಲಗೌಡ ಕೋನರೆಡ್ಡಿ, ರಾಜಕುಮಾರ ದೇಸಾಯಿ, ಡಾ.ಮಲ್ಲಿಕಾರ್ಜುನ ಹಳ್ಳಿ, ಶರಣಗೌಡ ಬಿರಾದಾರ, ಎಚ್.ಬಿ.ಬಾರಿಕಾಯಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net