

ಚಿಕ್ಕಮಗಳೂರು: ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸುವುದು ಸೇರಿ ಒಟ್ಟು 23 ಬೇಡಿಕೆಗಳನ್ನು ಮುಂದಿಟ್ಟು ಮಾ.22ರಂದು ಬೆಂಗಳೂರಿನ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು, ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆಗಳನ್ನು ವಾಪಸು ಪಡೆಯಬೇಕು ಹಾಗೂ ಕಾರ್ಮಿಕ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗುವುದು. ಹೋರಾಟದಲ್ಲಿ 31 ಜಿಲ್ಲೆಗಳ 48ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್, ಡಾ.ದರ್ಶನ್‍ಪಾಲ್, 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
3 ಸಾವಿರ ಕೋಟಿ ರೂ. ನಷ್ಟ:
ಕನಿಷ್ಠ ಬೆಂಬಲ ಬೆಲೆ ಮೊದಲಿನಿಂದಲೂ ಇದೆ. ಮುಂದೆಯೂ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಇದ್ದಾರೆ. ವಾಸ್ತವವಾಗಿ ಕೇಂದ್ರ ಘೋಷಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಗೆ ದೇಶಾದ್ಯಂತ ಕೃಷಿ ಉತ್ಪನ್ನಗಳು ಮಾರಾಟವಾಗುತ್ತಿವೆ. ರಾಜ್ಯದಲ್ಲಿ ಕಳೆದ ಸಾಲಿನಲ್ಲಿ 13 ಬೆಳೆಗಳಿಗೆ ಸಂಬಂಧಿಸಿದಂತೆ 3 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಅದೇ ಎಂ.ಎಸ್.ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿರುವ ಬೆಲೆಗೆ ಹೋಲಿಕೆ ಮಾಡಿದಲ್ಲಿ 20 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಕಲ್ಬುರ್ಗಿಯಲ್ಲಿ ಚಾಲನೆ:
ಕನಿಷ್ಠ ಬೆಂಬಲ ಬೆಲೆಯನ್ನು ದೇಶದ ಯಾವುದೇ ಭಾಗದ ರೈತರು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗಿಲ್ಲ. ಈ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ಮಾರುಕಟ್ಟೆಯಲ್ಲಿ ಸಾಕ್ಷಾತ್ ತೋರಿಸುವ ಆಂದೋಲನಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಜಿ.ಎಂ.ವೀರಸಂಗಯ್ಯ ಮಾತನಾಡಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಶಿವಾನಂದ ಕುಗ್ವೆ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮ್ಮಣಗೌಡ, ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.