ಮೈಸೂರು: ಸಕ್ಕರೆ ಕಾರ್ಖಾನೆ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಕ್ಕರೆ ಕಾರ್ಖಾನೆ ಕಾರ್ಮಿಕರ ಒಕ್ಕೂಟ ಅಧ್ಯಕ್ಷ ಬಿ.ನಾಗರಾಜು ತಿಳಿಸಿದರು.
ರಾಜ್ಯಾದ್ಯಂತ ಸುಮಾರು 79 ಸಕ್ಕರೆ ಕಾರ್ಖಾನೆಗಳಿದ್ದು, ಈವರೆಗೆ ಇವರ ವೇತನ ಹೆಚ್ಚಳಕ್ಕೆ ಕಾರ್ಖಾನೆ ಮಾಲೀಕರು ಹಾಗೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಆ.11ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಬೃಹತ್ ಸಮಾವೇಶ ನಡೆಸಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.
ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಅತ್ಯಲ್ಪ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಉದ್ಯಮಿಗಳು ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದರು. ಆದರೆ ಈಗ ಬಹುತೇಕ ಸಚಿವರು, ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದಾರೆ. ಹೀಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಶ್ನಿಸುವ ಧೈರ್ಯ ಮಾಡದೆ ಸುಮ್ಮನಿದ್ದಾರೆ. ಇದರಿಂದಾಗಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಮದು ಆರೋಪಿಸಿದರು.
ಬಹುತೇಕ ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ 25 ರಿಂದ ಪ್ರಾರಂಭಗೊಳ್ಳಲಿವೆ. ಇದಕ್ಕೂ ಮೊದಲು ಎಂಟನೇ ವೇತನ ಆಯೋಗದ ಒಪ್ಪಂದ ಏರ್ಪಡದಿದ್ದರೆ ಸೆಪ್ಟೆಂಬರ್‌ನಿಂದಲೇ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಲಾಗುತ್ತದೆಂದು ಎಚ್ಚರಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎನ್.ಕೃಷ್ಣೇಗೌಡ, ಕಾರ್ಮಿಕ ಮುಖಂಡರಾದ ಎಂ.ಇ.ಪಾರ್ಥ, ಎಚ್.ಎಸ್. ಗಿರೀಶ್, ಸಿದ್ದೇಗೌಡ, ಪುಟ್ಟಮಾದೇಗೌಡ, ರಾಮಕೃಷ್ಣ, ಜವರೇಗೌಡ, ಕುಬೇರ, ರಮೇಶ ಇತರರು ಇದ್ದರು.