

ಚಿಕ್ಕಬಳ್ಳಾಪುರ: ವಿಧಾನಪರಿಷತ್‌ಗೆ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತದ ಮತದಾನ ಪ್ರಕ್ರಿಯೆಯು ಶುಕ್ರವಾರ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆಯಿತು. ಶೇ.99.66 ರಷ್ಟು ಮತದಾನವಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದ 163 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದ ನಡೆಯಿತು. ಶೇ.99.66 ರಷ್ಟು ಮತದಾನವಾಗಿದ್ದು, ಇಷ್ಟರ ಮಟ್ಟದ ಪ್ರತಿಕ್ರಿಯೆಗೆ ಆಣೆ ಪ್ರಮಾಣ, ಕಾಂಚಾಣ ಸೇರಿ ರಾಜಕೀಯ ಪಕ್ಷಗಳ ನಾನಾ ಆಮಿಷಗಳು ಕೆಲಸ ಮಾಡಿರುವುದೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬಂದವು.
ನಿಯಮಾನುಸಾರ ಮತಗಟ್ಟೆ ಅಧಿಕಾರಿಗಳು ಮತ ಚಲಾವಣೆಯ ಅಣಕು ಪ್ರದರ್ಶನದೊಂದಿಗೆ ಬೆಳಗ್ಗೆ 7 ಕ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮತದಾರರು ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸಿದರು. ಪ್ರತಿ ಮತಗಟ್ಟೆ ಬಳಿ ಪೊಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿತ್ತು.
ಕೊನೇ ಕ್ಷಣದವರೆಗೂ ಮನವೊಲಿಕೆ: ಪ್ರತಿ ಮತಗಟ್ಟೆಯ ಬಳಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಮತದಾರ ಮನವೊಲಿಕೆಯ ಕಸರತ್ತು ನಡೆಸಿದರು. ಮತದಾರ ಪಟ್ಟಿ ಹಿಡಿದುಕೊಂಡು ಆಯಾ ಮತಗಟ್ಟೆಯ ವ್ಯಾಪ್ತಿಯಲ್ಲಿ ಮತ ಚಲಾಯಿಸಿದವರು, ಇನ್ನೂ ಬಾಕಿ ಇರುವವರ ಬಗ್ಗೆ ಮಾಹಿತಿ ಪಡೆಯುತ್ತಿದ್ದ, ಮತದಾರರ ಬಳಿಗೆ ತೆರಳಿ ಅಭ್ಯರ್ಥಿ ಪರ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡುಬಂದವು. ಮತದಾರರ ಮನೆಗೆ ತೆರಳಿ, ಮತಗಟ್ಟೆಗೆ ವಾಹನದಲ್ಲಿ ಕರೆದುಕೊಂಡು ಬರುವ ತಂತ್ರಗಾರಿಕೆಯನ್ನು ಅನುಸರಿಸಲಾಯಿತು. ಇದೇ ವೇಳೆ ಹಲವು ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಜತೆ ಜತೆಯಾಗಿ ಬಂದು ಶಕ್ತಿ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ವಿವಿಧೆಡೆ ಭೇಟಿ: ಜಿಲ್ಲಾಧಿಕಾರಿ ಆರ್.ಲತಾ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಬಗ್ಗೆ ಪರಿಶೀಲಿಸಿ, ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕಿನ ದೊಡ್ಡಮರಳಿ ಗ್ರಾಪಂ ಮತಗಟ್ಟೆ, ಚಿಕ್ಕಬಳ್ಳಾಪುರ ನಗರಸಭೆ ಮತಟ್ಟೆಯಲ್ಲಿ ಪರಿಶೀಲಿಸಿ ಗೊಂದಲಗಳಿಗೆ ಅವಕಾಶ ನೀಡದೇ ನಿಯಮಾನುಸಾರ ಪ್ರಕ್ರಿಯೆ ನಡೆಸಲು ಸೂಚಿಸಿದರು. ಎಲ್ಲ ಮತಗಟ್ಟೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ತಿಳಿಸಿದರು. ಉಪ ವಿಭಾಗಾಧಿಕಾರಿ ಎ.ಎನ್.ರಘುನಂದ್ ಪಟ್ರೇನಹಳ್ಳಿ ಗ್ರಾಪಂ ಮತಗಟ್ಟೆಗೆ ಭೇಟಿ ನೀಡಿದರು.
ಮತಗಟ್ಟೆಯಲ್ಲಿ ಗುಂಪು: ಇಲ್ಲಿನ ನಗರಸಭೆಯ ಮತಗಟ್ಟೆ ಕಟ್ಟಡದಲ್ಲಿನ ಸಭಾಂಗಣದ ಬಳಿ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ ಸೇರಿ ಹಲವರು ಗುಂಪು ಸೇರಿಕೊಂಡು ಗಂಟೆಗಟ್ಟಲೇ ಚರ್ಚಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡುತನ ತೋರಿದರು. ಮತಗಟ್ಟೆಯ ಪ್ರದೇಶದಲ್ಲಿ 5ಕ್ಕೂ ಹೆಚ್ಚು ಮಂದಿ ಓಡಾಡದಂತೆ ನಿಷೇಧಾಜ್ಞೆ ಘೋಷಿಸಲಾಗಿತ್ತಾದರೂ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಚರ್ಚಿಸುತ್ತ ನಿಯಮ ಉಲ್ಲಂಘಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ಮತ ಚಲಾವಣೆಯ ಗೊಂದಲ ಬಗೆಹರಿಸಿಕೊಳ್ಳುತ್ತಿದ್ದುದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದರು.
2,663 ಮತಗಳು ಚಲಾವಣೆ: ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆಗೆ ಶೇ.99.66 ರಷ್ಟು ಮತದಾನವಾಗಿದ್ದು ಒಟ್ಟಾರೆ ಮತದಾರರ ಪೈಕಿ 1 ಮತ ಮಾತ್ರ ಚಲಾವಣೆಯಾಗಿಲ್ಲ. ಉಳಿದಂತೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೌರಿಬಿದನೂರು ಹೊರತುಪಡಿಸಿದಂತೆ ಉಳಿದ 5 ತಾಲೂಕುಗಳಲ್ಲೂ ಶೇ.100 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯಲ್ಲಿ 1,248 ಪುರುಷರು ಮತ್ತು 1,416 ಮಹಿಳೆಯರು ಸೇರಿದಂತೆ 2,664 ಮಂದಿ ಮತದಾರರಿದ್ದು ಇದರಲ್ಲಿ 1,247 ಪುರುಷರು ಮತ್ತು 1,416 ಮಹಿಳೆಯರು ಸೇರಿದಂತೆ 2,663 ಮತಗಳು ಚಲಾವಣೆಯಾಗಿವೆ.
ಜೈಲಿನಲ್ಲಿರುವ ಮತದಾರ: ಜೈಲಿನಲ್ಲಿದ್ದ ಗೌರಿಬಿದನೂರು ತಾಲೂಕಿನ ಸೊನಗಾನಹಳ್ಳಿ ಗ್ರಾಪಂ ಸದಸ್ಯ ರವಿಕುಮಾರ್ ಮತದಾನದಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧನವಾಗಿತ್ತು. ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದು ಮತದಾನದ ವ್ಯವಸ್ಥೆಗೆ ಯಾವುದೇ ಪೂರ್ವಾನುಮತಿ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಮತ ಚಲಾವಣೆಗೆ ಸಾಧ್ಯವಾಗಲಿಲ್ಲ.