ರಾಜ್ಯದಲ್ಲಿ ರಂಗೇರಿದ ಪರಿಷತ್ ಅಖಾಡ: ಕಾಂಗ್ರೆಸ್, ಕಮಲ, ದಳಕ್ಕೆ ದುಗುಡ

BJP Congress JDS For Web 6x4
Published on

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಬೆನ್ನಲ್ಲೇ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದೆ. ನಾಮಪತ್ರ ಸಲ್ಲಿಸಲು ನಾಲ್ಕು ದಿನ ಬಾಕಿ ಇರುವಂತೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಪರಿಣಾಮ ಪಕ್ಷಗಳ ನಾಯಕರಿಗೆ ಒತ್ತಡ ಹೆಚ್ಚಾಗಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. 7 ಸ್ಥಾನಗಳಿಗೆ ಜೂ.29ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂ.18 ಕೊನೆಯ ದಿನ. ಬಿಜೆಪಿಗೆ 4, ಕಾಂಗ್ರೆಸ್​ಗೆ 2 ಹಾಗೂ ಜೆಡಿಎಸ್​ಗೆ ಒಬ್ಬರನ್ನು ಮೇಲ್ಮನೆಗೆ ಕಳಿಸಲು ಅವಕಾಶವಿದೆ. ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿದ್ದು, 22ರಂದೇ ಫಲಿತಾಂಶ ನಿಚ್ಚಳವಾಗಲಿದೆ.

ಈ ನಡುವೆ ಪರಿಷತ್ ಪ್ರವೇಶಾಕಾಂಕ್ಷಿಗಳ ಸಂಖ್ಯೆ ಮೂರೂ ಪಕ್ಷಗಳಲ್ಲಿ ಹೆಚ್ಚಾಗುತ್ತಿದೆ. ಜಾತಿವಾರು, ಪ್ರದೇಶವಾರು, ಪಕ್ಷಕ್ಕಾಗಿ ತ್ಯಾಗ ಮಾಡಿದ್ದು ಸೇರಿ ವಿವಿಧ ಆಯಾಮಗಳಲ್ಲಿ ತಾವು ಪರಿಷತ್ ಅವಕಾಶ ಪಡೆಯಲು ಸೂಕ್ತ ಎಂದು ಬಿಂಬಿಸಲು ಕಸರತ್ತು ನಡೆಸಿದ್ದಾರೆ.

ಮೂರೂ ಪಕ್ಷಗಳು ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಈಗ ಕೆಲವು ಹೆಸರು ಮುಂಚೂಣಿಯಲ್ಲಿದ್ದರೂ ಅಂತಿಮ ಕ್ಷಣದಲ್ಲಿ ಅಚ್ಚರಿ ಹೆಸರು ಬಂದರೂ ಆಶ್ಚರ್ಯಪಡಬೇಕಿಲ್ಲ. ದೆಹಲಿ ಮಟ್ಟದಲ್ಲಿ ಲಾಬಿ, ಸ್ವಾಮೀಜಿಗಳ ಒತ್ತಡ, ಜಾತಿ ಸಂಘಟನೆಗಳ ಪರೇಡ್ ಸೇರಿ ವಿವಿಧ ರೀತಿಯಲ್ಲಿ ಒತ್ತಡ ತರುವ ಕಾರ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಂದ ನಡೆದಿದೆ. ಭಾನುವಾರ ಮತ್ತು ಸೋಮವಾರ ಆಕಾಂಕ್ಷಿಗಳ ಪಾಲಿಗೆ ಮಹತ್ವದ ದಿನವಾಗಿದ್ದು, ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ.

ಬಿಜೆಪಿಯಲ್ಲಿ ತೀವ್ರ ಪೈಪೋಟಿ

  • ಸರ್ಕಾರ ರಚನೆಗೆ ತ್ಯಾಗಮಾಡಿದವರಿಗೆ ಅವಕಾಶ ಎಂಬ ಮಾತು ಸಿಎಂ ಸೇರಿದಂತೆ ಹಲವರಿಂದ ಕೇಳಿಬರುತ್ತಿದೆ
  • ಎಂಟಿಬಿ, ವಿಶ್ವನಾಥ್, ಶಂಕರ್ ಹೆಸರು ಚಲಾವಣೆ ಯಲ್ಲಿದ್ದು, ಸಿ.ಪಿ. ಯೋಗೇಶ್ವರ್ ಪ್ರಯತ್ನ ಜೋರಾಗಿದೆ
  • ಸೋಮವಾರ ಅಭ್ಯರ್ಥಿಗಳ ಪಟ್ಟಿ ದೆಹಲಿಗೆ ರವಾನೆಯಾಗಲಿದ್ದು, ನಾಲ್ಕನೇ ಹೆಸರಿನ ಬಗ್ಗೆ ಇನ್ನೂ ಕುತೂಹಲವಿದೆ

ಗೌಡರ ಕೃಪೆ ಯಾರಿಗೆ?

  • ಲಭ್ಯವಿರುವ ಒಂದು ಸ್ಥಾನಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ವರಿಷ್ಠ ದೇವೇಗೌಡರ ನಿರ್ಧಾರವೇ ಅಂತಿಮ.
  • ಆಕಾಂಕ್ಷಿಗಳೆಲ್ಲರೂ ಗೌಡರ ಮನೆಗೆ ಎಡತಾಕಿ ಅಪೇಕ್ಷೆ ಹೊರಹಾಕಿದ್ದಾರೆ. ಈವರೆಗೆ ಸ್ಪಷ್ಟ ಭರವಸೆ ಸಿಕ್ಕಿಲ್ಲ.
  • ಕೋನರೆಡ್ಡಿ, ವೈ.ಎಸ್.ವಿ.ದತ್ತಾ, ಕುಪೇಂದ್ರ ರೆಡ್ಡಿ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು

ಕಾಂಗ್ರೆಸ್​ಗೆ ಬಿಸಿತುಪ್ಪ

  • ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರಿಗೆ ಅವಕಾಶ ಎಂದು ನಿರ್ಧಾರವಾಗಿತ್ತು. ಆದರೆ ಈಗ ನಿಲುವು ಬದಲಿಸುವ ವಾತಾವರಣವಿದೆ.
  • ಚುನಾವಣೆಯಿಂದ ಹಿಂದೆ ಸರಿದಿದ್ದವರು ಪಟ್ಟುಹಿಡಿದಿದ್ದಾರೆ. ರಾಜೀವ್ ಗೌಡ, ಮುದ್ದಹನುಮೇಗೌಡ, ಚಿಮ್ಮನಕಟ್ಟಿ ಮುನ್ನೆಲೆಗೆ ಬಂದಿದ್ದಾರೆ.
  • ಎರಡು ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಸೋಮವಾರ ಕೆಲವು ಹೆಸರು ದೆಹಲಿಗೆ ರವಾನೆಯಾಗಲಿದ್ದು, ಅಲ್ಲೇ ತೀರ್ವನವಾಗಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net