

ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ವಿಧಾನ ಪರಿಷತ್ ನಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಸಂತಾಪ ಸೂಚಿಸುವ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಲಾಯಿತು.
ಸದನ ಸೇರುತ್ತಿದ್ದಂತೆಯೇ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸಂತಾಪ ಸೂಚನೆಗಳನ್ನು ಮಂಡಿಸಿ, ಮಹನೀಯರ ಸಾಧನೆ ಹಾಗೂ ಕೊಡುಗೆಗಳನ್ನು ಸ್ಮರಿಸಿದರು.ಕೇಂದ್ರದ ಮಾಜಿ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್, ಜಸ್ವಂತ್ ಸಿಂಗ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್, ಮಾಜಿ ಶಾಸಕರಾದ ಜೆ.ಶ್ರೀನುವಾಸರೆಡ್ಡಿ, ಕೆ.ಮಲ್ಲಪ್ಪ, ಮಾಜಿ ಸಚಿವ ಡಾ.ವೈ.ನಾಗಪ್ಪ, ರಂಗ ಕಲಾವಿದ ಕೊಡಗನೂರು ಜಯಕುಮಾರ್, ಸಂಗೀತ ನಿರ್ದೇಶಕ ರಾಜನ್, ಅಸಾಧಾರಣ ಪ್ರತಿಭೆ ವೈಕುಂಠರಾವ್ ಶೇಷಗಿರಿರಾವ್ ಸೋಂದ, ಚಿತ್ರ ಕಲಾವಿದ ಯಶವಂತ್ ಹಿಬಾರಿ, ವಯೊಲಿನ್ ವಾದಕ ಟಿ.ಎನ್.ಕೃಷ್ಣನ್, ಪತ್ರಕರ್ತರಾದ ಶ್ಯಾಮಸುಂದರ್ ಹಾಗೂ ರವಿ ಬೆಳಗೆರೆ ಅವರ ಸಾಧನೆ ಮತ್ತು ಸೇವೆಯನ್ನು ಕೊಂಡಾಡಿ ಕಂಬನಿ ಮಿಡಿಯಿತು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ ಸಂತಾಪ ಸೂಚಿಸುವ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಸಂತಾಪ ಸೂಚಿಸಿದ ಬಳಿಕ ಅರ್ಧ ತಾಸು ಕಲಾಪವನ್ನು ಸಭಾಪತಿ ಮುಂದೂಡಿದರು.