

ಸಿರಗುಪ್ಪ: ವಿಧಾನಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾಲೂಕಿನ ತೆಕ್ಕಲಕೋಟೆ, ಸಿರಗುಪ್ಪ, ಹಚ್ಚೊಳ್ಳಿ ಮತ್ತು ಕರೂರು ಸೇರಿ 4 ಕಡೆ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ತೆಕ್ಕಲಕೋಟೆಯಲ್ಲಿ 60, ಸಿರಗುಪ್ಪ 198, ಹಚ್ಚೊಳ್ಳಿ 4 ಮತ್ತು ಕರೂರು ಭಾಗದಲ್ಲಿ 20 ಶಿಕ್ಷಕ ಮತದಾರರಿದ್ದಾರೆ. ಪ್ರತಿ ಮತಗಟ್ಟೆಗೆ 5 ಜನ ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದ್ದು, ಅ.28ರ ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.
ಕಂಪ್ಲಿ ತಾಲೂಕಿನಲ್ಲಿ 154 ಮತದಾರರು
ಕಂಪ್ಲಿ: ಪಟ್ಟಣದ ನಾಡ ಕಚೇರಿಯಲ್ಲಿ ಅ.28ರಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ. 110 ಪುರುಷ ಮತ್ತು 44 ಮಹಿಳೆಯರು ಸೇರಿ ಒಟ್ಟು 154 ಶಿಕ್ಷಕ ಮತದಾರರಿದ್ದಾರೆ. ಮತದಾರರು ಕಡ್ಡಾಯವಾಗಿ ಭಾವಚಿತ್ರವುಳ್ಳ ಯಾವುದೇ ಅರ್ಹ ಗುರುತಿನ ಚೀಟಿ ತಪ್ಪದೆ ತರಬೇಕು ಎಂದು ತಹಸೀಲ್ದಾರ್ ಗೌಸಿಯಾ ಬೇಗಂ ತಿಳಿಸಿದ್ದಾರೆ.