ವಿಧಾನ ಪರಿಷತ್ ಪದವೀಧರ ಕ್ಷೇತ್ರವೂ ಕಲುಷಿತ

congress s.p.Dinesh
ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್
Published on

ಶಿವಮೊಗ್ಗ: ಬೇರೆ ಕ್ಷೇತ್ರಗಳಂತೆ ನೈಋತ್ಯ ಪದವೀಧರ ಕ್ಷೇತ್ರವೂ ಕಲುಷಿತಗೊಂಡಿದೆ. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಂಥವರು ಸ್ಪರ್ಧೆ ಮಾಡಿದ್ದ ಕ್ಷೇತ್ರ ಇದಲ್ಲ. ಈ ಹಿಂದಿದ್ದ ಚುನಾವಣೆಗಳಲ್ಲಿನ ಪಾವಿತ್ರೃತೆ ಈಗ ಉಳಿದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ಬೇಸರ ವ್ಯಕ್ತಪಡಿಸಿದರು.

2012ರಲ್ಲಿ ಡಿ.ಎಚ್.ಶಂಕರಮೂರ್ತಿ ಅವರೆದುರು ಸ್ಪರ್ಧೆ ಮಾಡಿದ್ದೇನೆ. ಅಂತಹ ಸರಳ, ಸಜ್ಜನಿಕೆ ಹೊಂದಿದ್ದವರು ಈಗಿಲ್ಲ. ಅಂತಹ ವ್ಯಕ್ತಿ ಎದುರು ನಾನು ಸ್ಪರ್ಧೆ ಮಾಡಿದ್ದೇ ಎಂಬುದು ಖುಷಿಯ ವಿಚಾರ. ಈಗೇನಿದ್ದರೂ ಹಣಬಲದ ಮೇಲೆ ಚುನಾವಣೆ ನಿಂತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಕೆಲವರು ಹಣ ಖರ್ಚು ಮಾಡುತ್ತಿದ್ದಾರೆ. ತೋಟದ ಮನೆಗಳು, ಕ್ಲಬ್‌ಗಳು ಭರ್ತಿಯಾಗತೊಡಗಿವೆ. ನೈಋತ್ಯ ಪದವೀಧರರ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿರುವ ನಾನು ಮತದಾರರ ವಿಶ್ವಾಸಗಳಿಸಿದ್ದೇನೆ. ಇದರಿಂದ ದೃಢ ಸಂಕಲ್ಪ ಮಾಡಿ ಮತ್ತೊಮ್ಮೆ ಸ್ಪರ್ಧಿಸಿದ್ದು 10 ತಿಂಗಳಿಂದ ಚುನಾವಣೆಗೆ ಎಲ್ಲ ತಯಾರಿ ನಡೆಸಿ ಮತದಾರರ ನೋಂದಣಿ ಮಾಡಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷರ ಕೈಮೀರಿ ಟಿಕೆಟ್ ನೀಡಲಾಗಿದೆ ಎಂದರು.
ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹಾಗೂ ಮತ್ತಿತರರು ನನ್ನ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಅದಕ್ಕಾಗಿ ಎಲ್ಲರಿಗೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಪ್ರಮುಖರಾದ ಕೆ.ಭಾಸ್ಕರ್, ಪ್ರೊ. ಕಲ್ಲಣ್ಣ, ಪ್ರೊ. ನಾರಾಯಣ್, ಈಶ್ವರ್, ವಿಜಯ್, ವೆಂಕಟಾಚಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net