

ರಾಯಚೂರು: ಜಗತ್ತಿಗೆ ಮಾರ್ಗದರ್ಶನ ನೀಡಿದ ಸನಾತನ ಧರ್ಮ, ಹತ್ತಾರು ಸಾವಿರ ವರ್ಷಗಳಿಂದ ಮತ್ತೊಬ್ಬರಿಗೆ ಉಪಕಾರ ಮಾಡಬೇಕು. ಸರ್ವರೂ ಸುಖವಾಗಿರಬೇಕು ಎನ್ನುವುದನ್ನು ತಿಳಿಸುತ್ತಾ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.
ಸ್ಥಳೀಯ ಯಾದವ ಸಂಘದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿ, ಶ್ರೀಕೃಷ್ಣನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಕಷ್ಟಗಳು ದೂರವಾಗುತ್ತವೆ ಎಂದರು.
ಶ್ರೀಕೃಷ್ಣ ಮಾನವ ಹೇಗೆ ಬದುಕಬೇಕು. ಹೇಗೆ ಬದುಕಬಾರದು ಎನ್ನುವ ಉತ್ತಮ ಸಂದೇಶಗಳನ್ನು ನೀಡಿದ್ದು, ಧರ್ಮವನ್ನು ರಕ್ಷಿಸುವ ಕುರಿತು ಹಾಗೂ ಕರ್ತವ್ಯ ಪಾಲನೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಶ್ರೀಕೃಷ್ಣ ಹೇಳಿದಂತೆ ಧರ್ಮ ರಕ್ಷಣೆ, ಶಿಷ್ಟರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.
ಇದಕ್ಕೂ ಮೊದಲು ನಗರೇಶ್ವರ ದೇವಸ್ಥಾನದಿಂದ ಯಾದವ ಸಂಘದ ಕಲ್ಯಾಣ ಮಂಟಪದವರೆಗೆ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ನಡೆಯಿತು. ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮೆರವಣಿಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಯಾದವ ಸಮಾಜದ ಮುಖಂಡರಾದ ಕೆ.ಮಾರೆಪ್ಪ, ಹರೀಶ ನಾಡಗೌಡ, ಹನುಮಂತಪ್ಪ, ಚಿನ್ನಾರೆಡ್ಡಿ ಯಾದವ, ಶರಣಪ್ಪ ಉಪಸ್ಥಿತರಿದ್ದರು.