ವಿಧಾನ ಪರಿಷತ್ ಚುನಾವಣೆ, ಎಸ್.ಕೆ. ಬೆಳ್ಳುಬ್ಬಿಗೆ ಅವಕಾಶ ನೀಡಲು ಗಾಣಿಗ ಸಮುದಾಯ ಆಗ್ರಹ

KALLINATH MAHARAJ
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕಲ್ಲಿನಾಥ ಮಹಾರಾಜರು ಸುದ್ದಿಗೋಷ್ಠಿ ನಡೆಸಿದರು. ಎಚ್.ಆರ್. ಉಟಗಿ, ಪ್ರಕಾಶ ಹಿಟ್ನಳ್ಳಿ, ಶರಣು ಕಾಖಂಡಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಅವಕಾಶ ನೀಡಲು ಗಾಣಿಗ ಸಮುದಾಯ ಆಗ್ರಹಿಸುತ್ತದೆ ಎಂದು ಕೊಲ್ಹಾರ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ಮಹಾರಾಜ ಹೇಳಿದರು.

ಗಾಣಿಗ ಸಮುದಾಯ ಅವಕಾಶ ವಂಚಿತವಾಗಿದೆ. ಅದರಲ್ಲೂ ಎಸ್.ಕೆ. ಬೆಳ್ಳುಬ್ಬಿ ಅವರು ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಗಾಣಿಗ ಸಮುದಾಯ ಒಕ್ಕೋರಲಿನಿಂದ ಬಿಜೆಪಿ ವರಿಷ್ಠರಿಗೆ ಆಗ್ರಹಿಸುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಎಸ್.ಕೆ. ಬೆಳ್ಳುಬ್ಬಿ ಗಾಣಿಗ ಸಮಾಜ ಸೇರಿದಂತೆ ಸರ್ವಸಮಾಜಗಳ ಬಗ್ಗೆ ಕಾಳಜಿಯುಳ್ಳ ನಾಯಕರಾಗಿದ್ದಾರೆ, ಹೀಗಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದು ಅಗತ್ಯವಾಗಿದೆ, ರಾಜ್ಯದಲ್ಲಿ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಸಂತ್ರಸ್ತರು, ರೈತರ ಪರ ಹೋರಾಟಗಳ ಮೂಲಕವೇ ಮಂಡಲ ಪಂಚಾಯಿತಿಯಿಅದ ಸಚಿವ ಸ್ಥಾನದವರೆಗೂ ಪರಿಶ್ರಮದಿಂದ ಬೆಳೆದು ಬಂದು ಇಂದು ಬಿಜೆಪಿ ಪಕ್ಷಕ್ಕೆ ಶಕ್ತಿಯಾಗಿ ನಿಂತಿದ್ದಾರೆ.

ಮೂರು ಬಾರಿ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡಿ ಹೆಚ್ಚಿನ ಶಾಸಕ ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಸಚಿವರಾಗಿದ್ದ ವೇಳೆ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚಿಸಿ ಮನವೊಲಿಸಿ ವಿಜಯಪುರ ಜಿಲ್ಲೆಗೆ ಉಷ್ಣ ವಿದ್ಯುತ್ ಸ್ಥಾವರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ತೆರನಾಗಿ ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜವು ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುತ್ತಲೇ ಬಂದಿದೆ. ಹೀಗಾಗಿ ಸಮಾಜಕ್ಕೂ ಈ ಬಾರಿ ಬಿಜೆಪಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

ಗಾಣಿಗ ಸಮುದಾಯ ಎಂದಿಗೂ ಬಿಜೆಪಿ ಪರವಾಗಿರುವ ಸಮಾಜ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಣಿಗ ಸಮುದಾಯದ ನಾಯಕ ಲಕ್ಷ್ಮಣ ಸವದಿಯವರಿಗೆ ಟಿಕೆಟ್ ಕೊಡದಿರುವ ಕಾರಣ ರಾಜ್ಯದಲ್ಲಿ ಗಾಣಿಗ ಸಮುದಾಯದ ಮತಗಳು ವಿಭಜನೆಯಾಗಿವೆ ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು ಎಂಬ ವಿಷಯವನ್ನು ಶ್ರೀಗಳು ಉಲ್ಲೇಖಿಸಿದರು.

ಈಗ ಬಿಜೆಪಿಯಲ್ಲಿ ಗಾಣಿಗ ಸಮಾಜದ ಒಬ್ಬ ಜನಪ್ರತಿನಿಧಿಯೂ ಇಲ್ಲ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ದೊಡ್ಡ ಸಮುದಾಯವಾದ ಗಾಣಿಗ ಸಮಾಜದ ಸಂಪೂರ್ಣ ಬೆಂಬಲ ಅತ್ಯಗತ್ಯವಾಗಿದೆ ಎಂದರು.
ಮುಖಂಡ ಎಚ್.ಆರ್. ಉಟಗಿ, ಪ್ರಕಾಶ ಹಿಟ್ನಳ್ಳಿ, ಶರಣು ಕಾಖಂಡಕಿ, ಬಸವರಾಜ ಹಳ್ಳಿ, ಸಂತೋಷ ಕಕ್ಕಳಮೇಲಿ, ಹುಚ್ಚಪ್ಪ ಬಾಟಿ, ಶ್ರೀಮಂತ ಹಂಗರಗಿ, ಮಂಜುನಾಥ ತುಂಬರಮಟ್ಟಿ, ಆನಂದ ಬಿಸ್ಟಗೊಂಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net