ಬಸವಣ್ಣ ಜಗತ್ತಿನ ಪ್ರಥಮ ಪ್ರಜಾಪ್ರಭುತ್ವವಾದಿ; ಬಸವರಾಜ ಹೊರಟ್ಟಿ ಅಭಿಮತ

BD J
Published on

ಬೆಂಗಳೂರು: ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊಟ್ಟ ಮೊದಲು ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ನೀಡಿದ ಬಸವಣ್ಣ ಪ್ರಥಮ ಪ್ರಜಾಪ್ರಭುತ್ವವಾದಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಿಸಿದ್ದಾರೆ.

ಶನಿವಾರ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಉಪರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರ 112ನೇ ಜನ್ಮದಿನಾಚರಣೆ ಮತ್ತು ಬಸವ ಸಮಿತಿ ವಜ್ರಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಅನುಷ್ಠಾನಗೊಳಿಸಿ, ಜಗತ್ತಿಗೆ ಜಾತ್ಯಾತೀತ ಸಮಸಮಾಜ, ಶೋಷಣೆರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವಾದರ್ಶವನ್ನು ಸಾರಿದ ಬಸವಣ್ಣನವರು ಕರ್ನಾಟಕದಲ್ಲಿದ್ದದ್ದು ನಾಡಿಗೆ ಬಹುದೊಡ್ಡ ಗೌರವ. ಬಸವಣ್ಣನ ತತ್ವಾದರ್ಶಗಳನ್ನು ಜಗತ್ತಿಗೆ ಮುಟ್ಟಿಸಬೇಕಿದ್ದು, ರಾಜಕಾರಣ ದೂರವಿಟ್ಟು ಕಾಳಜಿ ವಹಿಸಿದರೆ ಅದು ಸಾಧ್ಯವಾಗುತ್ತದೆ.

ಲಿಂಗಾಯತರು ಒಳಪಂಗಡಗಳನ್ನು ಮರೆತು ಒಂದಾಗಬೇಕು. ‘ಲಿಂಗಾಯತರು ಇಡೀ ಜಗತ್ತನ್ನು ಆಳಬಲ್ಲರು ಆದರೆ ಅವರಲ್ಲಿ ಒಗ್ಗಟ್ಟಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಹೇಳಿದ ಮಾತು ನಿಜ. ಲಿಂಗಾಯತರಲ್ಲಿ ಒಗ್ಗಟ್ಟು ಮೂಡಿಸಲು ಲಿಂಗೈಕ್ಯ ಬಿ.ಡಿ.ಜತ್ತಿಯವರು ಮಾಡಿದ ಕಾರ್ಯ ಸ್ತುತ್ಯಾರ್ಹ. ಬಸವಾದಿ ಶರಣರ ಬದುಕು ಬೋಧನೆಗಳನ್ನು ಸಮಾಜದ ಮುಂದಿಟ್ಟಿದ್ದ ಜತ್ತಿಯವರು ಶರಣರ ಬದುಕಿನ ಮಾರ್ಗದಲ್ಲಿ ಮುನ್ನಡೆದ ಮಹಾನಾಯಕ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಧರ್ಮಪ್ರಕಾಶ ಮುರಿಗಪ್ಪ ಚಿಗಟೇರಿ, ಡಾ.ಸಿ.ಎಂ. ಕುಂದಗೋಳ, ಹರೀಶ್ ಆರ್. ಹಿರೇಮಠ, ಶಂಕರ್ ಬಿ. ಗುಡಸ್, ವಚನ ಕುಮಾರಸ್ವಾಮಿ, ಡಾ.ಜಿ.ವಿ. ಜಯರಾಜಶೇಖರ್ ಮತ್ತು ವೀರೇಂದ್ರ ಮಂಗಳ ರವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ, ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಬೇಕು

ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕೆಂದು ಆದೇಶಿಸಿದ್ದರು. ರಾಜ್ಯದಲ್ಲಿ ವಿಮಾನ ನಿಲ್ದಾಣವೊಂದಕ್ಕೆ ಬಸವೇಶ್ವರರ ಹೆಸರಿಡುವ ಸಂಬಂಧ ಅವರಿಗೆ ಮನವರಿಕೆ ಮಾಡಬೇಕು. ಅದಕ್ಕೆ ಎಲ್ಲರೂ ಶ್ರಮಿಸೋಣ ಎಂದು ಬಸವರಾಜ ಹೊರಟ್ಟಿ ಕರೆ ನೀಡಿದರು.

ಬಿಡಿ ಜತ್ತಿ ಅವರದ್ದು ವಿಶ್ವವೇ ಗುರುತಿಸುವ ವ್ಯಕ್ತಿತ್ವ. ಸಮಾಜಕ್ಕೆ ಅವರ ಕೊಡುಗೆ ಹಾಗೂ ಸಾಧನೆಗಳು ಇಂದಿಗೂ ಪ್ರಸ್ತುತ. ಒಂದು ಸಾಮಾನ್ಯ ಕುಟುಂಬದಲ್ಲಿ ಜನಸಿ ಅಸಮಾನ್ಯ ಕೆಲಸಗಳನ್ನು ಮಾಡಿ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಮಹಾನ್ ನಾಯಕ

-ಯು.ಟಿ. ಖಾದರ್, ವಿಧಾನಸಭೆ ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net