

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣದ ಗಲಾಟೆಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ಮರ್ಯಾದೆ ಹೋಗುತ್ತದೆ ಎಂಬುದಾಗಿ ಹೆದರಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಗೇಪಲ್ಲಿ ಪಟ್ಟಣದ ಎರಡನೇ ವಾರ್ಡ್ ಶ್ರೀನಿವಾಸ್ (38 ವರ್ಷ ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
*ಪ್ರಕರಣದ ಹಿನ್ನೆಲೆ
ಇತ್ತೀಚೆಗೆ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಕ್ಷುಲ್ಲಕ ಕಾರಣಕ್ಕೆ ಬೋಂಡಾ ಸೀನು, ನಾಗೇಶ್, ಮುರಳಿ, ವಿಜಯಕುಮಾರ್ ತಂಡವು ಶ್ರೀನಿವಾಸ್ ಜತೆ ಗಲಾಟೆ ಮಾಡಿ, ಹಲ್ಲೆ ನಡೆಸಿತ್ತು. ಇದರ ದೃಶ್ಯಗಳನ್ನು ಹಲ್ಲೆಕೋರರು ವಿಡಿಯೋ ಸಹ ಮಾಡಿಕೊಂಡಿದ್ದಾರೆ. ಇದರ ನಡುವೆ ಹಲ್ಲೆಯ ವಿಚಾರವಾಗಿ ಶ್ರೀನಿವಾಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು ಹಲ್ಲೆಯ ವೇಳೆ ತೆಗೆದಿರುವ ವಿಡಿಯೋ ಮತ್ತು ಪೋಟೋ ಗಳನ್ನು ಸಾಮಾಜಿಕ ಜಾಲದಲ್ಲಿ ಹಂಚಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ. ಇದಕ್ಕೆ ಅಂಜಿ ಶ್ರೀನಿವಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
*ಡೆತ್ ನೋಟ್ ನಲ್ಲಿ ಏನಿದೆ?
ಗಲಾಟೆಯ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ನನ್ನ ಮಾನ ಮರ್ಯಾದೆ ಹೋಗುತ್ತದೆ. ಮತ್ತೊಂದು ಕಡೆ ನನಗೆ ಆಗಿರುವ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ನನಗೆ ನ್ಯಾಯ ಸಿಗಲಿಲ್ಲ. ನಾನು ಇನ್ನೇತಕ್ಕೆ ಬದುಕಬೇಕು? ಎಂದು ಡೆತ್ ನೋಟ್ ನಲ್ಲಿ ಶ್ರೀನಿವಾಸ್ ಬರೆದಿದ್ದಾನೆ. ಮೃತನ ಪತ್ನಿ ಲಕ್ಷ್ಮೀ, ಗಂಡನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.