ಅತ್ತೆ ಥಳಿಸಿದ ಸೊಸೆ ವಿಡಿಯೋ ವೈರಲ್

img_1964-1.jpg
Published on

ಚನ್ನಪಟ್ಟಣ

ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಯನ್ನು ಪೈಶಾಚಿಕವಾಗಿ ಥಳಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ತಾಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿ ನಡೆದಿರುವ ಈ ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹೌದು..., ತಾಲೂಕಿನ ಅಬ್ಬೂರುದೊಡ್ಡಿ ಗ್ರಾಮದ ಶಾಂತಮ್ಮ ಪಾಪಿ ಸೊಸೆಯಿಂದ ಹಲ್ಲೆಗೆ ಒಳಗಾಗಿರುವ ವೃದ್ಧೆ. ಈಕೆಯ ಸೊಸೆ ಸಂಜನಾ ದೊಣ್ಣೆಯಿಂದ ಮನಸೋಇಚ್ಚೇ ಥಳಿಸಿದ್ದು, ಅತ್ತೆ ಎಂಬ ಕನಿಷ್ಠ ಗೌರವ ಇಲ್ಲದೇ ಕಾಲಿನಿಂದ ಒದ್ದು, ದೊಣ್ಣೆ ಮುರಿಯುವರೆಗೂ ಥಳಿಸಿದ್ದಾಳೆ. ಸೊಸೆಯ ಏಟು ತಾಳತಾರದೇ ವೃದ್ಧೆ ಕಿರುಚಾಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಪ್ರಿಲ್ ತಿಂಗಳದ್ದು?

ಅತ್ತೆಯ ಮೇಲೆ ಸೊಸೆ ನಡೆಸುತ್ತಿರುವ ಪೈಶಾಚಿಕ ಹಲ್ಲೆಯ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಈ ವಿಡಿಯೋ ಸಾಕಷ್ಟು ವೈರಲ್ ಆದ ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ತನಿಖೆ ವೇಳೆ ಈ ಹಲ್ಲೆ ನಡೆದಿರುವುದು ಏಪ್ರಿಲ್ ತಿಂಗಳಲ್ಲಿ ಎಂಬುದು ತಿಳಿದುಬಂದಿದೆ. 8 ವರ್ಷಗಳ ಹಿಂದೆ ಶಾಂತಮ್ಮ ಪತಿ ಮೃತಪಟ್ಟಿದ್ದು, ಮಗ ಹಾಗೂ ಸೊಸೆಯ ಜೊತೆ ಜೀವನ ಸಾಗಿಸುತ್ತಿರುತ್ತಾರೆ. ಏ‌ ೧೯ ರಂದು ಮನೆಯಲ್ಲಿ ತನ್ನಷ್ಟಕ್ಕೆ ಕುಳಿತಿದ್ದ ಶಾಂತಮ್ಮ ಮೇಲೆ ಪಾಪಿ ಸೊಸೆ ಸಂಜನಾ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಳೆದಾಡಿ ದೊಣ್ಣೆಯಿಂದ ಹಲ್ಲೆ ನಡೆಸುತ್ತಾಳೆ. ಜೊತೆಗೆ, ಹಲ್ಲೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಸಾಯಿಸುವ ಬೆದರಿಕೆ ಒಡ್ಡುತ್ತಾಳೆ. ಹಲ್ಲೆಯಿಂದ ಗಾಯಗೊಂಡಿದ್ದ ಶಾಂತಮ್ಮರನ್ನು ಸಂಬಂಧಿಕರೊಬ್ಬರು
ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಶಾಂತಮ್ಮನವರ ತವರು ಮನೆಗೆ ಬಿಟ್ಟುಬಂದಿರುತ್ತಾರೆ. ಶಾಂತಮ್ಮ ಸಹೋದರ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಕೊಡಿಸಿ, ಹುಷಾರಾದ ಮೇಲೆ ಮತ್ತೆ ಗ್ರಾಮಕ್ಕೆ ಕರೆತಂದು ಬಿಟ್ಟಿರುತ್ತಾರೆ. ಇಷ್ಟರ ನಡುವೆಯೂ ಮಗ ಹಾಗೂ ಸೊಸೆಯ ಮೇಲಿನ ಮಮಕಾರದಿಂದ ವೃದ್ದಜೀವ ಯಾವುದೇ ದೂರನ್ನು ನೀಡಿರುವುದಿಲ್ಲ.

ವಿಡಿಯೋ ಮಾಡಿದವನು ಪಾಪಿಪುತ್ರ!

ತನ್ನ ತಾಯಿಯ ಮೇಲೆ ಹೆಂಡತಿ ನಡೆಸಿದ ಪೈಶಾಚಿಕ ಹಲ್ಲೆಯನ್ನು ವಿಡಿಯೋ ಮಾಡಿದವನು ಪಾಪಿ ಪುತ್ರ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಂಡ ಹಾಗೂ ಹೆಂಡತಿಗೆ ಈ ವೃದ್ಧಜೀವ ಜೊತೆಯಲ್ಲಿರುವುದು ಇಷ್ಟವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದಾ ಶಾಂತಮ್ಮನೊಂದಿಗೆ ಕ್ಯಾತೆ ತೆಗೆದು ಜಗಳ ಮಾಡುತ್ತಿರುತ್ತಾರೆ. ಸಂಜನಾ ದೊಣ್ಣೆಯಿಂದ ಮನಸ್ಸೋಇಚ್ಚೆ ಥಳಿಸುತ್ತಿದ್ದರು, ಹೆತ್ತತಾಯಿ ಎಂಬ ಕನಿಷ್ಟ ಪ್ರೀತಿ ಇಲ್ಲದೇ ರವೀಂದ್ರ ಹೆಂಡತಿಗೆ ಪ್ರಚೋದನೆ ನೀಡಿರುತ್ತಾನೆ‌. ಆದರೆ, ತಾನೇ ಮಾಡಿದ ವಿಡಿಯೋ ಹೇಗೆ ಹೊರಬಂತು ಎಂಬುದಕ್ಕೆ ಸ್ಪಷ್ಟವಾದ ‌ಮಾಹಿತಿ ತಿಳಿದುಬಂದಿಲ್ಲ. ಆದರೆ, ಹೃದಯಹೀನ ದಂಪತಿಗಳ ಈ ಕೃತ್ಯಕ್ಕೆ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.

ಪ್ರಕರಣ ದಾಖಲು!

ಈ ಹಲ್ಲೆಯ ವಿಡಿಯೋ ವೈರಲ್ ಆಗುವ ಜೊತೆಗೆ ಹಲವಾರು ಪ್ರಜ್ಞಾವಂತರು ವ್ಯಾಪಕವಾಗಿ ಖಂಡಿಸಿದರು. ಇದರೊಂದಿಗೆ, ಇಲಾಖೆ ಸುಮೊಟೋ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಇದರ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಾಂತರ ಸಿಪಿಐ ಕೃಷ್ಣ ಮತ್ತು ಸಿಬ್ಬಂದಿ ವೃದ್ಧೆಯ ಹೇಳಿಕೆ ಪಡೆದು ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇವಲ ಪ್ರಕರಣ ದಾಖಲಿಸುವುದಕ್ಕೆ ಸೀಮಿತವಾಗದೇ ಇಬ್ಬರು ದಂಪತಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಲಿ ಎಂಬ ಆಗ್ರಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net