

ಬೀದರ್: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಬಿಸಿಲು ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ೪೨ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಹೀಗೇ ಮುಂದುವರಿಯುವ ಸಾಧ್ಯತೆ ಇದ್ದು, ಜನರು ಬೆಳಗ್ಗೆ ೧೧ರಿಂದ ಸಂಜೆ ೪ರವರೆಗೆ ಹೆಚ್ಚಾಗಿ ಹೊರಗಡೆ ತಿರುಗಾಡಬಾರದು. ಅನಿವಾರ್ಯವಿದ್ದಲ್ಲಿ ತೆಳುವಾದ ಬಟ್ಟೆ ಮತ್ತು ಚಪ್ಪಲಿ ಹಾಕಿಕೊಂಡು ಹೋಗಬೇಕು. ತಂಪಾದ ಹಣ್ಣಿನ ರಸ, ಮಜ್ಜಿಗೆ ಹಾಗೂ ಎಳೆನೀರು ಹೆಚ್ಚಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.
ತಾಪಮಾನ ಹೆಚ್ಚಾಗಿರುವ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರ್, ತಾಪಂ ಇಒ, ಆರೋಗ್ಯ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆ, ಗ್ರಾಪಂ ಮೂಲಕ ಹೆಚ್ಚು ಪ್ರಚಾರ ನೀಡುವ ಮೂಲಕ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕೆಂದು ಜನಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸ್, ರೈಲು ನಿಲ್ದಾಣದಂಥ ಸಾರ್ವಜನಿಕ ಸ್ಥಳಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಬೇಕು. ಧಾರ್ಮಿಕ ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಮಾಡುವಂತೆ ಸಂಬAಧಿಸಿದ ಆಯಾ ಮಂದಿರ ಮುಖ್ಯಸ್ಥರಿಗೆ ತಿಳಿಸಬೇಕು. ಕಟ್ಟಡ ಕಾರ್ಮಿಕರು ಬೆಳಗ್ಗೆ ೧೧ರಿಂದ ಸಂಜೆ ೪ರ ಅವಧಿಯಲ್ಲಿ ಕೆಲಸ ಮಾಡಬಾರದು. ಈ ಕುರಿತು ಕಾರ್ಮಿಕ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಕಳೆದ ವರ್ಷ ೩೮ ಮತ್ತು ೩೯ ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಮಳೆಯಾಗದ್ದರಿಂದ ಇದೀಗ ತಾಪಮಾನ ಹೆಚ್ಚಾಗಿದೆ. ಟೀ, ಕಾಫಿ ಹಾಗೂ ಮದ್ಯಪಾನದಿಂದ ಜನರು ದೂರ ಇರಬೇಕು. ಸಾಕು ಪ್ರಾಣಿಗಳಿಗೆ ಸಾಕಷ್ಟು ನೀರು ಇಡಬೇಕು. ಸುಸ್ತು, ವಾಂತಿ, ಬೆವರು ಇತರ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕೋರಿದರು.
ಬಿಸಿಲು ಹೆಚ್ಚಾದಾಗ ಅಗ್ನಿ ಅವಘಡ ಹೆಚ್ಚಾಗಿ ಸಂಭವಿಸುತ್ತಿವೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು ಸಿದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್, ನಗರಸಭೆ ಆಯುಕ್ತ ಶಿವರಾಜ ರಾಠೋಡ್, ಅಗ್ನಿಶಾಮಕ ದಳ ಅಧಿಕಾರಿ ರವೀಂದ್ರ ಘಾಟಗೆ ಇತರರಿದ್ದರು.
ಓಆರ್‌ಎಸ್ ಸಂಗ್ರಹಿಸಿ ಇಡಬೇಕು: ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಓಆರ್‌ಎಸ್ ಪ್ಯಾಕೆಟ್‌ಗಳು ಹೆಚ್ಚಾಗಿ ಸಂಗ್ರಹಿಸಿ ಇಡಬೇಕು. ವೈದ್ಯರು ಕರ್ತವ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದು, ಜನರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು. ಡಿಎಚ್‌ಒ ಡಾ.ಧ್ಯಾನೇಶ್ವರ ನಿರಗುಡೆ ಮಾತನಾಡಿ, ಎಲ್ಲ ಆಸ್ಪತ್ರೆಗಳಲ್ಲಿ ಓಆರ್‌ಎಸ್ ಸಂಗ್ರಹ ಇದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾದವರ ಕುರಿತು ಮಾಹಿತಿಯನ್ನು ಗಮನಕ್ಕೆ ತರಬೇಕೆಂದು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲು ಹೆಚ್ಚಾಗಿ ಇರುವುದರಿಂದ ಜನರು ಅನಗತ್ಯವಾಗಿ ಓಡಾಡಬಾರದು. ರೈತರು, ಕಾರ್ಮಿಕರು ಹೊಲಗಳಿಗೆ ಹೋಗುವಾಗ ನೀರನ್ನು ಜತೆಯಲ್ಲಿ ತೆಗೆದುಕೊಂಡು ಹೋಗಬೇಕು. ಒಳ್ಳೆಯ ಗಾಳಿ-ಬೆಳಕು ಇರುವ ಮನೆಗಳಲ್ಲಿ ಇರಬೇಕು.
| ಡಾ.ಗಿರೀಶ್ ಬದೋಲೆ ಜಿಪಂ ಸಿಇಒ