ಎಸ್ಸೆಸ್ಸೆಲ್ಸಿ ಗೊಂದಲ ನಿವಾರಣೆಗೆ ವಿಡಿಯೋ

Suresh Kumar
Published on

ಬೆಂಗಳೂರು: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2019-20ರ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲು ಮಾಡಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಉಂಟಾಗಿರುವ ಗೊಂದಲ, ಆತಂಕ ನಿವಾರಣೆಗಾಗಿ ವಿಶೇಷ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಶಿಕ್ಷಣ ಸಚಿವ ಸುರೇಶ್​ಕುಮಾರ್ ಮಂಗಳವಾರ ‘ಸಂವೇದನಾ ಫೋನ್​ಇನ್’ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಒಂದೂವರೆ ಗಂಟೆ ನಡೆದ ಸಂವಾದದಲ್ಲಿ ಸಚಿವರು 36 ಕರೆ ಸ್ವೀಕರಿಸಿದರು. ಈ ಪೈಕಿ ಬಹುತೇಕ ಕರೆಗಳು ಎಸ್ಸೆಸ್ಸೆಲ್ಸಿ ಪಠ್ಯಕ್ರಮ, ಪರೀಕ್ಷಾ ಪದ್ಧತಿಯಲ್ಲಿನ ಬದಲಾವಣೆ ಕುರಿತಾಗಿತ್ತು.

ವಿದ್ಯಾರ್ಥಿಗಳಿಗೆ ಗೊಂದಲ ನಿವಾರಿಸಲು ಸಚಿವರು ಫೋನ್​ನಲ್ಲಿಯೇ ಪ್ರಯತ್ನ ಮಾಡಿದರು. ಆದರೆ, ಸಂಪೂರ್ಣವಾಗಿ ಅರ್ಥವಾಗುವಂತೆ ಹಾಗೂ ಕರೆ ಮಾಡದ ಮಕ್ಕಳಲ್ಲಿರುವ ಗೊಂದಲಗಳ ಪರಿಹಾರಕ್ಕಾಗಿ ವಿಡಿಯೋ ಮಾಡಲಾಗುತ್ತಿದೆ.

ಪರೀಕ್ಷಾ ಪದ್ಧತಿಯಲ್ಲಿ ತಂದಿರುವ ಬದಲಾವಣೆ ಕುರಿತು ತಿಳಿಸಲು ವಿಡಿಯೋ ನಿರ್ವಿುಸಿ ಯೂಟ್ಯೂಬ್, ಫೇಸ್​ಬುಕ್, ಇಲಾಖೆ ವೆಬ್​ಸೈಟ್, ವಾಟ್ಸ್​ಆಪ್​ಗಳಲ್ಲಿ ಅಪ್​ಲೋಡ್ ಮಾಡುವ ಬಗ್ಗೆ ಅಧಿಕಾರಿಗಳ ಬಳಿ ಸಚಿವರು ಪ್ರಸ್ತಾಪಿಸಿದರು. ಪರೀಕ್ಷೆಗೆ ಎರಡು ತಿಂಗಳಿಗಿಂತ ಕಡಿಮೆ ಸಮಯ ಇರುವುದರಿಂದ ಆದಷ್ಟು ಶೀಘ್ರ ವಿಡಿಯೋ ಮಾಡಿ ಅಪ್​ಲೋಡ್ ಮಾಡಲು ಮಂಡಳಿ ನಿರ್ದೇಶಕಿ ವಿ. ಸುಮಂಗಲಾರಿಗೆ ಆದೇಶಿಸಿದರು.

ಆತಂಕ ಬಿಟ್ಟು ಬಿಡಿ: ಪರೀಕ್ಷೆ ಎಂದರೆ ಇಂದಿಗೂ ಮಕ್ಕಳಲ್ಲಿ ಭಯವಿದೆ. ಇದಕ್ಕೆ ಮಕ್ಕಳ ಮನಸ್ಥಿತಿ ಪಾಲಕರ ಒತ್ತಡ ಎರಡೂ ಕಾರಣವಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಎಂದರೆ ಭವಿಷ್ಯ ನಿರ್ಧಾರ ಮಾಡುವ ಅಂತಿಮ ಪರೀಕ್ಷೆ ಅಲ್ಲ. ವಿದ್ಯಾರ್ಥಿಗಳು ಈ ಸಮಯದಲ್ಲಿ ಆರೋಗ್ಯದ ಕಡೆಗೂ ಗಮನ ನೀಡಬೇಕು. ಚೆನ್ನಾಗಿ ಓದಿ ಭಯವಿಲ್ಲದೆಯೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಸಚಿವರು ಕಿವಿಮಾತು ಹೇಳಿದರು.

ಗೊಂದಲ ಬೇಡ: ಈ ವರ್ಷ ಬಹು ಆಯ್ಕೆ ಮಾದರಿಯ ಪ್ರಶ್ನೆ ಜಾಸ್ತಿ ಕೇಳುವ ಬದಲು ಸವಿಸ್ತಾರವಾಗಿ ಬರೆಯುವುದಕ್ಕೆ ಹೆಚ್ಚಿನ ಅಂಕ ನೀಡಲಾಗಿದೆ. ಅಲ್ಲದೆ ಪ್ರಶ್ನೆಗಳನ್ನು ನೇರವಾಗಿ ಕೇಳುಬದಲು ಅಪ್ಲಿಕೇಷನ್ ಮಾದರಿಯಲ್ಲಿ ಕೇಳಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಗೊಂದಲ ತಂದಿದೆ.

ಕರೆ ಮಾಡಿದ ಹಲವಾರು ವಿದ್ಯಾರ್ಥಿಗಳು ಈ ಬಗ್ಗೆಯೇ ಪ್ರಶ್ನೆ ಕೇಳಿದರು. ಅವುಗಳಿಗೆ ಉತ್ತರಿಸಿದ ಮಂಡಳಿ ನಿರ್ದೇಶಕಿ, ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರ್ಧ ಗಂಟೆ ಸಮಯ ಹೆಚ್ಚಿಸಲಾಗಿದೆ. ಮೊದಲು ಪ್ರಶ್ನೆಯನ್ನು ಓದಿ ಅರ್ಥ ಮಾಡಿಕೊಂಡು ಆನಂತರ ಉತ್ತರಿಸಬಹುದು ಎಂದು ತಿಳಿಸಿದರು.

ಬ್ಲೂ ಪ್ರಿಂಟ್ ಕೊಡಿ: ಕರೆ ಮಾಡಿದವರಲ್ಲಿ ಬಹುತೇಕರು ಪ್ರಶ್ನೆ ಪತ್ರಿಕೆಯ ನೀಲಿನಕ್ಷೆ ನೀಡುವಂತೆ ದುಂಬಾಲು ಬಿದ್ದರು. ಇದಕ್ಕೆ ಉತ್ತರಿಸಿದ ಸುಮಂಗಲಾ, ಪರೀಕ್ಷೆಯಲ್ಲಿ ಯಾವ ಪ್ರಶ್ನೆ ಕೇಳುತ್ತಾರೆ ಎಂಬುದು ನನಗೂ ಗೊತ್ತಿಲ್ಲ. ಶಿಕ್ಷಕರಿಗೆ ನೀಲಿನಕ್ಷೆ ನೀಡಲಾಗುತ್ತಿತ್ತು. ಇದೀಗ ಅದನ್ನು ನೀಡುತ್ತಿಲ್ಲ. ನೀವು ಸಂಪೂರ್ಣವಾಗಿ ಪಾಠ ಓದಿ. ಪ್ರಶ್ನೆ ಯಾವ ವಿಷಯದಿಂದ ಬಂದರೂ ಉತ್ತರಿಸಲು ಸಿದ್ಧರಿಬೇಕೆಂದರು.

ಮೌಂಟ್ ಕಾರ್ಮೆಲ್​  ಶಾಲೆ ವಿದ್ಯಾರ್ಥಿನಿ ಪಂಚಮಿ ಕರೆ ಮಾಡಿ ಹಾಲಿ ಇರುವ ಪಠ್ಯಕ್ರಮ ಜ್ಞಾನ ನೀಡುತ್ತದೆಯೇ ಹೊರತು ಉದ್ಯೋಗ ನೀಡುವುದಕ್ಕೆ ಅನುಕೂಲವಾಗುವುದಿಲ್ಲ. ಪ್ರಚಲಿತ ಕಾಲಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕೆಂದು ಮನವಿ ಮಾಡಿದಳು. ಅದಕ್ಕೆ ಪ್ರತಿಕ್ರಿಯಿ ಸಿದ ಸುರೇಶ್​ಕುಮಾರ್, ಇದಕ್ಕಾಗಿಯೇ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ವೃತ್ತಿ ಕೌಶಲದ ಶಿಕ್ಷಣವೂ ಅದರಲ್ಲಿರಲಿದೆ ಎಂದರು.

ಸಿಇಟಿ ಕೋಚಿಂಗ್ ಪ್ರಸ್ತಾವನೆ

ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಕೋಚಿಂಗ್ ನೀಡುವಂತೆ ಹಿರಿಯೂರಿನ ವಿದ್ಯಾರ್ಥಿನಿ ಭಾಗ್ಯಶ್ರೀ ಮನವಿ ಮಾಡಿದಳು. ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪರಿಶೀಲನಾ ಹಂತದಲ್ಲಿದೆ. ಈ ಕುರಿತ ಪಠ್ಯಗಳನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಅದನ್ನು ಅಧ್ಯಯನ ಮಾಡಬಹುದು ಎಂದು ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸಚಿವರು, ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುತ್ತದೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net