

ಚಿತ್ರದುರ್ಗ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ದೆಹಲಿಯಲ್ಲಿ ಈಚೆಗೆ ಆಯೋಜಿಸಿದ್ದ ಒಂಬತ್ತನೆ ರಾಷ್ಟ್ರೀಯ ವಿಜ್ಞಾನ ಕಾರ್ಯಯೋಜನೆ ವಸ್ತುಪ್ರದರ್ಶನ ಮತ್ತು ಪ್ರತ್ಯಕ್ಷಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಲಾಸ್ಯಾ ಚಂದ್ರಶೇಖರ್ ತಾವರೆ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ಪಡೆದಿದ್ದಾರೆ.
ವಿದ್ಯಾರ್ಥಿನಿ ಲಾಸ್ಯಾ ಸೃಜನಾತ್ಮಕ ಕೌಶಲದಿಂದ ತಯಾರಿಸಿದ್ದ ʼಒಳಚರಂಡಿ ನೀರನ್ನು ಹೀರುವ ಸಾಧನʼ ಎಂಬ ವಿಜ್ಞಾನ ಮಾದರಿಗೆ ಈ ಅವಾರ್ಡ್ ಲಭಿಸಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮಾದರಿಯೂ ಎರಡು ಭಾಗಗಳನ್ನು ಹೊಂದಿದ್ದು, ಒಂದು ಡಿಪ್ಪರ್ ಮತ್ತೊಂದು ಕಲೆಕ್ಟರ್ ಆಗಿ ಕಾರ್ಯನಿರ್ವಸುತ್ತದೆ. ಈ ಸಾಧನ ಸಫಾಯಿ ಕರ್ಮಚಾರಿಗಳ ಕಾರ್ಯ ಬಹುಸರಳ ಹಾಗೂ ಸುಲಭವಾಗಿಸುವ ಕುರಿತು ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಮುಖ್ಯಶಿಕ್ಷಕ ಸಿ.ಡಿ.ಸಂಪತ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ಡಯಟ್ ವತಿಯಿಂದ ಇಬ್ಬರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್, ಶೈಕ್ಷಣಿಕ ನಿರ್ದೇಶಕ ಎಸ್.ಎಂ.ಪೃಥ್ವೀಶ್, ನಿರ್ದೇಶಕಿ ಸುನೀತಾ ವಿಜಯಕುಮಾರ್, ಸಂಸ್ಥೆಯ ಅಕಾಡೆಮಿಕ್ ಆಡಳಿತಾಧಿಕಾರಿ ಡಾ.ಕೆ.ಎನ್.ಸ್ವಾಮಿ, ಐಸಿಎಸ್‌ಇ ಪ್ರಾಂಶುಪಾಲ ಪಿ.ಬಸವರಾಜಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.