ದೃಢ ಸಂಕಲ್ಪವಿದ್ದರೆ ಗೆಲುವು ಸುಲಭ

mysore
Published on

ಮೈಸೂರು: ಸೋಲಿಗೆ ಹತಾಶರಾಗಬೇಡಿ, ದೃಢ ಸಂಕಲ್ಪ ಮಾಡಿ ಮುನ್ನುಗ್ಗಿದರೆ ಗೆಲುವು ಸುಲಭ ಎಂದು ಪ್ರವಾಸೋದ್ಯಮ ಇಲಾಖೆಯ ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅಭಿಪ್ರಾಯಪಟ್ಟರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಮುಕ್ತಗಂಗೋತ್ರಿಯ ಗಂಗಾ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.


ಸಾಧನೆ ಮಾಡಲೇ ಬೇಕು ಎಂಬ ತುಡಿತ ಇದ್ದರೆ ಯಾರೂ ಏನು ಬೇಕಾದರೂ ಸಾಧಿಸಬಹುದು. ಆದರೆ ಅದಕ್ಕೆ ಪರಿಶ್ರಮ ಬೇಕು. ಆಸೆಗೆ ತಕ್ಕ ಕನಸು ಕಾಣಿರಿ, ಅದಕ್ಕೆ ಪೂರಕವಾಗುವಂತೆ ಉತ್ತಮ ತಯಾರಿ ಮಾಡಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.


ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಎರಡು ಅಂಶ ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ಏನನ್ನು ಓದಬೇಕು? ಎಂಬುದನ್ನು ಒಂದು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಮಾದರಿ ಪ್ರಶ್ನೆಪತ್ರಿಕೆಗಳ ಸಹಾಯ ತೆಗೆದುಕೊಳ್ಳಬಹುದು. ಎರಡನೆಯದು ಪುನರ್ ಅಧ್ಯಯನ ಯಾವುದೇ ವಿಷಯ ಅಥವಾ ಸಂಗತಿಯನ್ನು ಒಂದೇ ಬಾರಿ ಓದಿ ಮುಗಿಸುವುದಕ್ಕಿಂತ ಅದನ್ನು ಸಮಯ ಸಿಕ್ಕಾಗೆಲ್ಲ ಪುನರ್ ಅಧ್ಯಯನ ಮಾಡಬೇಕು ಎಂದರು.


ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಇರುವ ಗುಂಪಿನೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಅವುಗಳೆಲ್ಲವು ಪರೀಕ್ಷೆಗೆ ನೆರವಾಗುತ್ತವೆ ಎಂದ ಅವರು, ತಾವು ಕೆಎಎಸ್ ಪರೀಕ್ಷೆಗೆ ತಯಾರಾದ ಬಗ್ಗೆ ವಿವರಣೆ ನೀಡಿ ಪರೀಕ್ಷಾರ್ಥಿಗಳನ್ನು ಹುರಿದುಂಬಿಸಿ ಹತಾಶೆ ಬಿಡಿ ದೃಢಸಂಕಲ್ಪ ಮಾಡಿ ಎಂದು ಕರೆ ನೀಡಿದರು.


ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಹೆಚ್ಚಿನ ಒತ್ತು ನೀಡಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯ ಮೌಲ್ಯ ನಶಿಸಿ ಹೋಗುತ್ತಿವೆ. ಪ್ರೀತಿ ವಿಶ್ವಾಸ ಸಂಬಂಧಗಳಿಗಿಂತ ಹಣ, ಅಧಿಕಾರವೇ ಹೆಚ್ಚಾಗಿದೆ. ಯುವಕರು ಈ ಕುರಿತು ಚಿಂತಿಸಬೇಕು ಎಂದರು.


ಎಷ್ಟೇ ಎತ್ತರದ ಹುದ್ದೆಗೆ ಹೋದರೂ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ಅರಿವೇ ಗುರು ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು ಎಂದರು ತಿಳಿಸಿದರು.


ಕುಲಸಚಿವ ಪ್ರೊ. ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ, ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net