

ಚಿಮ್ಮಡ: ಚಿಮ್ಮಡ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಬಿಜೆಪಿ ಬೆಂಬಲಿತ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ.
ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸಮ್ಮುಖದಲ್ಲಿ ಶನಿವಾರ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿಯ 28 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 19 ಸದಸ್ಯರು ಅವಿಶ್ವಾಸ ನಿರ್ಣಯ ಪರ ಮತ ಚಲಾಯಿಸಿದ್ದರಿಂದ ಅಧ್ಯಕ್ಷೆ ಮಾಲಾ ಅಶೋಕ ಮೋಟಗಿ ಅಧಿಕಾರ ಕಳೆದುಕೊಂಡರು.
ಇಪ್ಪತ್ತೆಂಟು ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹದಿನೈದು ತಿಂಗಳ ಹಿಂದೆ ಬಿಜೆಪಿ ಬೆಂಬಲಿತ 19 ಸದಸ್ಯರ ಬೆಂಬಲದೊಂದಿಗೆ ಮಾಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಬಿಜೆಪಿ ಬೆಂಬಲಿತ 19 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿ ಜಮಖಂಡಿಯ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಿದ್ದರು.
ಸದಸ್ಯರ ಮನವಿಗೆ ಮನ್ನಣೆ ನೀಡಿ ಉಪವಿಭಾಗಾಧಿಕಾರಿಗಳು ನಿರ್ಣಯ ಮಂಡಿಸಲು ಅವಕಾಶ ನೀಡಿದ್ದರು. ಗ್ರಾಮ ಪಂಚಾಯಿತಿ 28 ಸದಸ್ಯರ ಪೈಕಿ ಹಾಜರಿದ್ದ 23 ಸದಸ್ಯರಲ್ಲಿ 19 ಸದಸ್ಯರು ಅವಿಶ್ವಾಸ ನಿರ್ಣಯದ ಪರ ಹಾಗೂ 4 ಸದಸ್ಯರು ನಿರ್ಣಯ ವಿರುದ್ಧ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ನೀಲಣ್ಣವರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ ಸಭೆಯಲ್ಲಿ ಹಾಜರಿದ್ದು ಎಸಿಗೆ ನೆರವಾದರು.
ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗುತ್ತಿದ್ದಂತೆ ಬಿಜೆಪಿ ಬೆಂಬಲಿ ಸದಸ್ಯರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಚಿಮ್ಮಡ ಗ್ರಾಮದ ಬಸ್ ನಿಲ್ದಾಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೈಕಾರ ಹಾಕುತ್ತ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿಮ್ಮಡದ ಬಿಜೆಪಿ ಮುಖಂಡರಾದ ಶಂಕರ ಬಟರ್ಕುಕಿ, ಪಿ.ಆರ್. ಪಾಲಬಾವಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜೇರಿ, ಪ್ರಭು ಮುಧೋಳ, ಹಣಮಂತ ನೇಸೂರ, ಸಂಗಮೇಶಗೌಡ ಪಾಟೀಲ, ಪ್ರಭು ನೇಸೂರ, ಬೀರಪ್ಪ ಹಳೆಮನಿ ಇದ್ದರು.
ಅವಿಶ್ವಾಸ ನಿರ್ಣಯ ಮಂಡನೆಗೆ ಎಸಿ ಅವರಿಗೆ ಮನವಿ ಸಲ್ಲಿಸಿದ ಬಳಿಕ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಕೆಲ ದಿನಗಳಿಂದ ಹಲವರನ್ನು ವಿವಿಧ ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಅವಿಶ್ವಾಸ ಮಂಡನೆ ದಿನ ಶನಿವಾರ ಎಲ್ಲ ಸದಸ್ಯರನ್ನು ಚಿಮ್ಮಡ ಗ್ರಾಮಕ್ಕೆ ಕರೆತರಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮ ಪಂಚಾಯಿತಿ ಸುತ್ತ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಬನಹಟ್ಟಿ ಸಿಪಿಐ ಸಂಜಿವ ಬಳಗಾರ, ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ, ಕ್ರೈಂ ಪಿಎಸ್‌ಐ ವಿಜಯ ಕಾಂಬಳೆ, ತೇರದಾಳ ಪಿಎಸ್‌ಐ ಅಪ್ಪು ಐಗಳಿ, ಮಹಾಲಿಂಗಪುರ ಪಿಎಸ್‌ಐ ಮಧು, ಮುಧೋಳ ಪಿಎಸ್‌ಐ ಅಜಿತ ಹೊಸಮನಿ, ಜಮಖಂಡಿ ಕ್ರೈಂ ಪಿಎಸ್‌ಐ ಹುಚ್ಚಪ್ಪ ಹೊಸಮನಿ ಹಾಗೂ ಜಮಖಂಡಿ ಗ್ರಾಮೀಣ ಪಿಎಸ್‌ಐ ಗಂಗಾಧರ ಪೂಜಾರಿ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಬಂದೋಬಸ್ತ್ ಕೈಗೊಂಡಿದ್ದರು. ಬಾಗಲಕೋಟೆಯ ಸಶಸ ಪಡೆ 4 ವಾಹನ, ಗ್ರಾಮದ ಬೀಟ್ ಪೊಲೀಸ್ ಆರ್.ಬಿ.ಪೂಜೇರಿ, ಎ.ಐ.ಹುನ್ನೂರು ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.