

ಮಡಿಕೇರಿ: ಅವಿರತ ಶ್ರಮದಿಂದ ಮಾತ್ರ ಪ್ರತಿ ಕ್ಷೇತ್ರದಲ್ಲಿ ಗೆಲುವು ಸಾಧ್ಯ ಎಂದು ಚೆಟ್ಟಳ್ಳಿಯ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಹೇಳಿದರು.
ಚೆಟ್ಟಳ್ಳಿಯ ಚೇರಳ ಗೌಡ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ೧೪ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ನಮಗೆ ಏನು ಮಾಡಿದೆ ಎಂದು ಕೇಳುವ ಬದಲು, ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಚಿಂತನೆ ನಡೆಸಬೇಕು. ಸಂಘದ ಸದಸ್ಯರೆಲ್ಲರೂ ಸಂಘ ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ತೋರಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅವಿರತ ಶ್ರಮದಿಂದ ಮಾತ್ರ ಪ್ರತಿ ಕ್ಷೇತ್ರದಲ್ಲಿ ಗೆಲುವು ಸಾಧ್ಯ ಎಂದು ಹೇಳಿದರು.
ಸನ್ಮಾನ: ಹಾಕಿ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ನಂತರ ಅಂತರಾಜ್ಯ ಕ್ರೀಡಾಕೂಟದಲ್ಲಿ ಹೆಚ್ಚಿನ ಗೋಲುಗಳಿಸಿ ಖೇಲೋ ಇಂಡಿಯಾ ಟೂರ್ನಮೆಂಟ್ ನಲ್ಲಿ ರನ್ನರ್ ಅಪ್ ಸ್ಥಾನಗಳಿಸಿದ ಸಂಘದ ಸದಸ್ಯ ಮರದಾಳು ಗೋಪಾಲ ಅವರ ಪುತ್ರಿ ಯಶಿಕಾ, ಟೇಕ್ವಾಂಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ಪಡೆದುಕೊಂಡ ಸಂಘದ ಸದಸ್ಯ ಕೊಳಂಬೇರ ಚೇತನ್‌ರವರ ಪುತ್ರಿ ಚಾರ್ವಿ ಹಾಗೂ ಸಂಘದ ಅಧ್ಯಕ್ಷ ಅಯಂಡ್ರ ರಾಘವಯ್ಯ ಅವರನ್ನು ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಸನ್ಮಾನಿಸಿ ಗೌರವಿಸಿದರು.
ಸಂಘದ ಕಾರ್ಯದರ್ಶಿ ಆಜೀರ ಧನಂಜಯ ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು ಮತ್ತು ಉಪಖಜಾಂಚಿ ಪೇರಿಯನ ಉದಯಕುಮಾರ್ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೊಸಮನೆ ಟಿ.ಪೂವಯ್ಯ, ವಿಶೇಷ ಸಲಹೆಗಾರ ಮೇಚನ ವಾಸು, ಉಪ ಕಾರ್ಯದರ್ಶಿಗಳಾದ ನೂಜಿಬೈಲು ನಾಣಯ್ಯ, ಮರದಾಳು ಜನಾರ್ಧನ, ಸಂಘದ ಖಜಾಂಚಿ ಮುಕ್ಕಾಟಿರ ಪಳಂಗಪ್ಪ, ನಿರ್ದೇಶಕರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.